ದುಬೈನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ : ಜಿಲ್ಲೆಯಿಂದ ಡಾ. ಅರ್ಚನಾ ಅಥಣಿ ಕವಿಯತ್ರಿಯಾಗಿ ಆಯ್ಕೆ
ಲೋಕದರ್ಶನ ವರದಿ
ಕಾಗವಾಡ 22: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಅಥಣಿ ತಾಲೂಕಿನ ರಡ್ಡೇರಹಟ್ಟಿ ಸರಕಾರಿ ಪ್ರೌಢ ಶಾಲೆಯ ಉಪನ್ಯಾಸಕಿ, ಖ್ಯಾತ ಸಾಹಿತಿ, ಬರಹಗಾರ್ತಿ ಹಾಗೂ ಕವಯತ್ರಿ ಡಾ. ಅರ್ಚನಾ ಅಥಣಿ ಅವರು ದುಬೈನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತೀಯ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಕೌನ್ಸಿಲ್ ವತಿಯಿಂದ ಹಮ್ಮಿಕೊಂಡಿರುವ 34ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಕಾರ್ಯಕ್ರಮದಲ್ಲಿ ಹಲವಾರು ದಿಗ್ಗಜರೊಂದಿಗೆ ಡಾ.ಅರ್ಚನಾ ಅಥಣಿ ಅವರು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ.
ಆಗಸ್ಟ್ 27ರಂದು ಶನಿವಾರ ದುಬೈಯನ ಪ್ರತಿಷ್ಠಿತ ಫಾರ್ಚೂನ್ ಅಲ್ ಖುಸೈಸ್ ಹೊಟೇಲ್ನ ಸಭಾಭವನದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಫೆಸ್ಟ್ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುಮುಖ ಪ್ರತಿಭೆಯಾಗಿರುವ ಡಾ.ಅರ್ಚನಾ ಅಥಣಿ ಅವರೊಂದಿಗೆ ರಾಜ್ಯ ಹಾಗೂ ದೇಶ,ವಿದೇಶಗಳಿಂದ 50 ಕ್ಕೂ ಹೆಚ್ಚು ಸಾಹಿತಿಗಳು, ಕವಿಗಳೂ ಭರತನಾಟ್ಯ, ಜಾನಪದ ಹಾಡುಗಾರರು ಭಾಗವಹಿಸಿ ತಮ್ಮದೇ ಆದ ಶೈಲಿಯಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ತರಲಿದ್ದಾರೆ.
ಕಳೆದ 2021 ರಲ್ಲಿ ಗಾಂಧಿ ಜಯಂತಿ ನಿಮಿತ್ಯ ಅಕ್ಟೋಬರ 1,2 ಮತ್ತು 3 ರಂದು ಮುರು ದಿನಗಳವರೆಗೆ ಮಾಲ್ಡೀವ್ಸ್ ದೇಶದಲ್ಲಿ ಜರುಗಿದ್ದ 25 ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಡಾ.ಅರ್ಚನಾ ಅಥಣಿ ಅವರು, ದೇಶ ವಿದೇಶಗಳಲ್ಲಿ ತಮ್ಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಬರಹ, ಕವಿತೆಗಳ ಮೂಲಕ ಕನ್ನಡ ನಾಡಿನ ಮನೆಮಾತಾಗಿರುವುದು ಸಂತಸದ ಸಂಗತಿ.
ಅವರು ಬೆಳಗಾವಿ ಜಿಲ್ಲೆಯಿಂದ ಏಕೈಕ ಕವಿಯತ್ರಿಯಾಗಿ ಆಯ್ಕೆಯಾಗಿದ್ದು ಗಡಿ ಭಾಗದಲ್ಲಿ ಸಾಹಿತ್ಯಾಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿದೆ.