ಮಹಿಳೆ ಅಬಲೆಯಲ್ಲ ಸಬಲೆ ಎಂದು ಸಾಬೀತು ಮಾಡಿದ್ದಾಳೆ : ಓಲೇಕಾರ
ಶಿಗ್ಗಾವಿ 15: ಶಕ್ತಿ ಸ್ವರೂಪಿಯಾಗಿರುವ ಮಹಿಳೆ, ಪುರುಷರ ಸಮನಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಶೌರ್ಯ, ಸಾಧನೆಯ ಪ್ರತಿಭೆ ಪ್ರದರ್ಶಿಸುವ ಮೂಲಕ ತಾನು ಅಬಲೆಯಲ್ಲ ಸಬಲೆ ಎಂಬುದು ಸಾಬೀತು ಮಾಡಿದ್ದಾಳೆ ಎಂದು ಖ್ಯಾತ ಜಾನಪದ ಕಲಾವಿದೆ ಸಾವಕ್ಕ ಓಲೇಕಾರ ಅಭಿಪ್ರಾಯಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಪುರಸಭೆ ಕಾರ್ಯಲಯದಿಂದ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಮೊಟ್ಟ ಮೊದಲಿಗೆ ಹೋರಾಟದ ಕಿಚ್ಚು ಹೊತ್ತಿಸಿದ್ದು ಮಹಿಳೆ ವೀರರಾಣಿ ಚನ್ನಮ್ಮ ಎಂಬದನ್ನು ಮರೆಯುವಂತಿಲ್ಲ. ಮಹಿಳೆ ಮನಸು ಮಾಡಿದರೇ ಎಲ್ಲದನ್ನು ಸಾಧಿಸಬಲ್ಲಳು ಎಂಬುದಕ್ಕೆ ದೇಶದ ಸಾಧಕರ ಸಾಲಿನಲ್ಲಿ ಅನೇಕ ಮಹಿಳೆಯರಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಸಮನ್ವಯಾಧಿಕಾರಿ ಶೈಲಜಾ ಪಾಟೀಲ ಮಾತನಾಡಿ, ಮಹಿಳೆ ಇಂದು ಎಲ್ಲ ರಂಗಗಳಲ್ಲಿಯೂ ತನ್ನ ಪ್ರಭಾವ ಬೆಳೆಸಿಕೊಂಡು ಪುರುಷನಿಗೆ ಸರಿಸಮವಾಗಿ ಬಾಳುತ್ತಿದ್ದಾಳೆ. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಕೈವಾಡದ ಶಕ್ತಿಯಿದೆ ಹೀಗಾಗಿ ಮಹಿಳೆಯರು ಸಮಯಕ್ಕೆ ಒತ್ತು ನೀಡಬೇಕು ಎಂದರು.
ಸಾಮಾಜಿಕ ಕಾರ್ಯಕರ್ತೆ ಸಂತೋಷಿಮಾತಾ ಬಡಿಗೇರ ಮಾತನಾಡಿ, ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಆಚರಿಸಲ್ಪಡುವ ಮಹಿಳಾ ದಿನಾಚರಣೆಗೆ ಅರ್ಥ ಬರಲು ಪ್ರತಿಯೊಬ್ಬ ಮಹಿಳೆಯರು ಅವಕಾಶ ಬಳಿಸಿ ಕೊಂಡು ಸ್ವಾವಲಂಬನೆಯಿಂದ ಮುಖ್ಯವಾಹಿನಿಗೆ ಬರಬೇಕು ಎಂದರು.
ಪುರಸಭೆ ವ್ಯವಸ್ಥಾಪಕರಾದ ಮಂಗಳಗೌರಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಿಲ್ಪಾ ಮಂಟಗಣಿ, ಪುರಸಭೆ ಸದಸ್ಯರಾದ ಅನುರಾದ ಮಾಳವದೆ, ಜ್ಯೋತಿ ಕೊಟ್ರ್ಪನವರ, ಮಹಬೂಬಿ ನೀರಲಗಿ, ಶಾರದಾಂಬ ಬಳ್ಳಾರಿ, ಲಕ್ಷ್ಮವ್ವ ಬಳ್ಳಾರಿ, ಚಿಟ್ಟೆಮ್ಮ ಪೂಜಾರ, ಚನ್ನಯ್ಯ ಹಿರೇಮಠ ಸೇರಿದಂತೆ ಪುರಸಭೆ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ರಾಜು ಕೆಂಬಾವಿ ನಿರೂಪಿಸಿದರು.