ಉಗಾರದಲ್ಲಿ ಅಂತರ್ ರಾಜ್ಯಮಟ್ಟದ ಮುಕ್ತ ವ್ಹಾಲಿಬಾಲ್ ಪಂದ್ಯಾವಳಿ
ಲೋಕದರ್ಶನ ವರದಿ
ಕಾಗವಾಡ 07 : ಗಡಿ ಭಾಗದಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚಿಸಿ, ಗ್ರಾಮೀಣ ಯುವಜನರಲ್ಲಿ ಕ್ರೀಡಾ ಶಕ್ತಿಯನ್ನು ಉತ್ತೇಜಿಸುವ ಉದ್ದೇಶದಿಂದ ಯುವಕರು ಸೇರಿ, ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿರುವುದು ಸಂತೋಶದ ವಿಷಯವಾಗಿದೆ. ಜೊತೆಗೆ ಯುವಕರ ಕಾರ್ಯಕ್ಕೆ ಗ್ರಾಮದ ಮುಖಂಡರು ಸಹಕಾರ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದು ಕಾಗವಾಡ ಸಿಡಿಪಿಓ ಸಂಜೀವಕುಮಾರ ಸದಲಗಿ ತಿಳಿಸಿದ್ದಾರೆ.
ಅವರು, ಬುಧುವಾರ ದಿ. 04 ತಾಲೂಕಿನ ಉಗಾರ ಖುರ್ದ ಪಟ್ಟಣದ ಉಗಾರ ವ್ಹಾಲಿಬಾಲ್ ಬಾಯ್ಸ್ ಆಯೋಜಿಸಿದ್ದ ಅಂತರ ರಾಜ್ಯ ಮಟ್ಟದ ಪುರುಷರ ಮುಕ್ತ ವ್ಹಾಲಿಬಾಲ್ ಪಂದ್ಯಾವಳಿಗಳನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.
ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಭುಜಗೌಡ ಪಾಟೀಲ ಮಾತನಾಡಿ, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಹಾಗೂ ಯುವ ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದ್ದು, ಕ್ರೀಡಾಸ್ಫೂರ್ತಿ ಮತ್ತು ಪರಸ್ಪರ ಸ್ನೇಹಭಾವ ಬೆಳೆಸಲು ಸಹಕಾರಿಯಾಗಿವೆ ಎಂದು ಹೇಳಿದರು.
ವಿವಿಧ ರಾಜ್ಯಗಳ ಸುಮಾರು ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಆಟಗಾರರು ತಮ್ಮ ಅತ್ಯುತ್ತಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು. ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದ ಆಯೋಜಕರು, ಕ್ರೀಡಾಪಟುಗಳು, ತೀರ್ುಗಾರರು, ಪ್ರಾಯೋಜಕರು ಹಾಗೂ ಕ್ರೀಡಾಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಪಂದ್ಯಾವಳಿಯುದ್ದಕ್ಕೂ ತಂಡಗಳ ನಡುವೆ ರೋಚಕ ಹಾಗೂ ಜಿದ್ದಾಜಿದ್ದಿನ ಪಂದ್ಯಗಳು ನಡೆದವು.
ಆಟಗಾರರ ಅದ್ಭುತ ಆಟ, ಸಂಘಟಿತ ತಂಡದ ಪ್ರದರ್ಶನ ಮತ್ತು ಗೆಲುವಿಗಾಗಿ ನಡೆಸಿದ ಹೋರಾಟ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿತು. ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ಟ್ರೋಫಿ, ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.