ರಾಯಣ್ಣ, ಶಿವಾಜಿ ಮೂರ್ತಿಗಳಿಗೆ ಅವಮಾನ : ಕಠಿಣ ಶಿಕ್ಷೆ ಆಗ್ರಹ
ಇಂಡಿ20: ದೇಶಪ್ರೇಮಿಗಳಾದ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ಆರ್. ಎಸ್. ರೇವಡಿಗಾರ ಅವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ಮಾನವಹಕ್ಕುಗಳ ಜನಜಾಗೃತಿ ಸಮಿತಿ, ರಾಷ್ಟ್ರೀಯ ಚರ್ಮಕಾರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಒಂದು-ಜಾತಿ ಜನಾಂಗಕ್ಕೆ ಸೀಮಿತವಲ್ಲ. ಅವರು ಇಡೀ ದೇಶದ ಆಸ್ತಿ. ಆದರೆ ಇಂದು ರಾಜಕೀಯ ಲಾಭಕ್ಕೋ ಮತ್ಯಾವುದೋ ಕಾರಣಕ್ಕೋ ಅವಮಾನ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ದುಷ್ಕರ್ಮಿಗಳು ಈರ್ವರ ಮೂರ್ತಿಗೆ ಅಪಮಾನ ಮಾಡಿದ್ದು ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ ಎಂದರು.
ಶ್ರೀಶೈಲಗೌಡ ಪಾಟೀಲ ಅಯೂಬ ನಾಟೀಕಾರ, ಮಹಿಬೂಬ ಬೇನೂರ ಮಾತನಾಡಿ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರಿಬ್ಬರೂ ದೇಶಾಭಿಮಾನಿಗಳಾಗಿದ್ದರು. ರಾಜಕೀಯ ಲಾಭಕ್ಕಾಗಿಯೇ ಇಂತಹ ಹೇಸಿಗೆ ಕೆಲಸ ಮಾಡಲಾಗಿದೆ. ಈ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಮತ್ತು ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ರಾಜ್ಯದಿಂದ ನಿಷೇಧಿಸಬೇಕೆಂದು ಆಗ್ರಹಿಸಿದರು.
ಸಿದ್ದು ಡಂಗಾ, ನಿಯಾಜ ಅಗರಖೇಡ, ಪವನ್ ಕೊಡಹೊನ್ನ, ಗಡ್ಡೆಪ್ಪ ಕಲ್ಮನಿ, ಮುತ್ತು ಪೂಜಾರಿ, ಸಿದ್ದು ಪೂಜಾರಿ, ಸಂತೋಶ ಹೊಸಮನಿ, ಅಮರ ತೋಡಕರ್, ದುಂಡು ಬಿರಾದಾರ, ಬಾಬು ಮೇತ್ರಿ, ಮಾಳು ಮ್ಯಾಕೇರಿ, ಮುತ್ತು ಪೈಕಾರ, ಸಂಜು ಪೈಕಾರ, ಮಾಳು ಗುಡ್ಲ, ರಾಜು ಮುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.