ಕಾಗವಾಡ

ಕನ್ನಡಿಗರ ಹೋಟೆಲ್, ಕರ್ನಾಟಕ ವಾಹನಗಳ ಮೇಲೆ ಕಲ್ಲು ತೂರಾಟ

ಕನ್ನಡಿಗರ ಹೋಟೆಲ್, ಕರ್ನಾಟಕ ವಾಹನಗಳ ಮೇಲೆ ಕಲ್ಲು ತೂರಾಟ

ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ  

ಶೇಡಬಾಳ/ ಕಾಗವಾಡ 18: ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟಿಸಿ ಶಿವಸೇನಾ ಗುಂಡಾಗಳು ಮಹಾರಾಷ್ಟ್ರದ ಸಾಂಗಲಿ ಮತ್ತು ಮಿರಜ ನಗರಗಳಲ್ಲಿ ಕನ್ನಡಿಗರ ಹೋಟೆಲ್‌ಗಳ ಮೇಲೆ ಹಾಗೂ ಕರ್ನಾಟಕ ಪಾಸಿಂಗ್ ಹೊಂದಿದ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಗಳು ವರದಿಯಾಗಿವೆ. 

ಇದರಿಂದಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕಾಗವಾಡ ಗಡಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೋಲಿಸ್‌ರು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿ ಅಹಿತಕರ ಘಟನೆಯಾಗದಂತೆ ಎಚ್ಚರಿಕೆ ವಹಿಸಿದರು. ಇಂದು ಮುಂಜಾನೆಯಿಂದಲೆ ಸಾಂಗಲಿ ಹಾಗೂ ಮಿರಜ ನಗರಗಳಲ್ಲಿ ಶಿವಸೇನಾ ಗುಂಡಾಗಳು ಕನ್ನಡಿಗರ ಹೋಟೆಲ್, ಆಸ್ಪತ್ರೆ, ಓಷಧಿ ಅಂಗಡಿಗಳ ಮೇಲೆ ಅಳವಡಿಸಲಾದ ಕನ್ನಡದ ಬೋರ್ಡ್‌ಗಳಿಗೆ ಮಶಿ ಬಳಿದು ತಮ್ಮ ಗುಂಡಾ ಪ್ರವರ್ತಿಯನ್ನು ಪ್ರದರ್ಶಿಸಿದರು. ಕರ್ನಾಟಕದ ಪಾಸಿಂಗ್ ಹೊಂದಿದ ವಾಹನಗಳಿಗೆ ಕಲ್ಲು ತೂರಾಟ ಮಾಡಿದ ಘಟನೆಗಳು ಜರುಗಿದವು.  

ಮಹಾರಾಷ್ಟ್ರದಲ್ಲಿ ಗಲಭೆಯಾಗುತ್ತಿರುವದನ್ನು ಗಮನಿಸಿದ ಕರ್ನಾಟಕ ಅಥಣಿ ಡಿವಾಯ್‌ಎಸ್‌ಪಿ ಗೀರೀಶ ಹಾಗೂ ತಹಶೀಲ್ದಾರ ರಾಜೇಶ ಬುರ್ಲಿ, ಪಿಎಸ್‌ಐ ರಬಕವಿ ಕರ್ನಾಟಕದ ಪಾಸಿಂಗ್ ಹೊಂದಿದ ವಾಹನಗಳನ್ನು ಮಹಾರಾಷ್ಟ್ರಕ್ಕೆ ಹೋಗದಂತೆ ತಡೆದು ಮರಳಿ ಕರ್ನಾಟಕಕ್ಕೆ ಕಳುಹಿಸಿದ ಘಟನೆ ಜರುಗಿತು. ಅದೇ ರೀತಿ ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ಕರ್ನಾಟಕ ಪ್ರವೇಶಿಸದಂತೆ ಪೋಲಿಸ್‌ರು ಎಚ್ಚರಿಕೆ ವಹಿಸಿದರು. ಇದರಿಂದಾಗಿ ಕೆಲವು ಗಂಟೆಗಳ ಕಾಲ ಗಡಿಯಲ್ಲಿ ಕುತೂಹಲಕರ  ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಸಾರ್ವಜನಿಕರು ಸಾಂಗಲಿ, ಮಿರಜ ನಗರಗಳಿಂದ ವಾಹನಗಳ ಮೂಲಕ ಆಗಮಿಸಿ ಕಾಲ್ನಡಿಗೆಯ ಮೂಲಕ ಗಡಿ ಪ್ರವೇಶಿಸಿ ಮತ್ತೇ ಕರ್ನಾಟಕದಲ್ಲಿ ವಾಹನಗಳ ಮೂಲಕ ಸಂಚರಿಸಿದ ಘಟನೆಗಳು ಜರುಗಿದವು. ಒಟ್ಟಿನಲ್ಲಿ ಈ ಘಟನೆಯಿಂದ ಪ್ರಯಾಣೀಕರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. 


ಸುದ್ದಿ ಓದಿ