ಕೃಷಿ ಉಪನಿರ್ದೇಶಕರ ಕಚೇರಿ-2 ಕಟ್ಟಡಕ್ಕೆ ಶಾಸಕ ಪಾಟೀಲ ಶಂಕು ಸ್ಥಾಪನೆ
ಇಂಡಿ: ಭವಿಷ್ಯದಲ್ಲಿ ಎರಡನೇ ಜಿಲ್ಲೆಯಾಗುವ ಅವಕಾಶ ಬಂದರೆ ಅದು ಇಂಡಿಯೇ ಆಗಬೇಕು. ಆ ಪ್ರಮಾಣದಲ್ಲಿ ಜಿಲ್ಲೆಗೆ ಅವಶ್ಯವಿರುವ ಬಹುತೇಕ ಕಚೇರಿಗಳು ಈಗಾಗಲೆ ಇಂಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ಸಾಲಿಗೆ ಕೃಷಿ ಉಪ ನಿರ್ದೇಶಕರ ಕಚೇರಿ-2 ಸಹ ಸೇರಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರ ಹೇಳಿದರು.
ಬುಧವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆದ ಸಮಗ್ರ ಕೃಷಿ ಪದ್ಧತಿಯ ಉತ್ತೇಜನಕ್ಕಾಗಿ ಉತ್ಕೃಷ್ಟತಾ ಕೃಷಿ ಉಪನಿರ್ದೇಶಕರ ಕಚೇರಿ-2 ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ, ತೋಟಗಾರಿಕೆ, ನಿಂಬೆ ಅಭಿವೃದ್ಧಿ, ಮೀನುಗಾರಿಕೆ, ರೇಶ್ಮೆ, ಪಶು ಸಂಗೋಪನೆ ಸೇರಿದಂತೆ ರೈತರಿಗೆ ಅನುಕೂಲವಾಗುವ ಎಲ್ಲ ಕಚೇರಿಗಳು ಒಂದೇ ಕಡೆ ಕೇಂದ್ರಿಕೃತವಾಗಿ ರೈತರಿಗೆ ಭವಿಷ್ಯದಲ್ಲಿ ಅನುಕೂಲವಾಗುವ ದೃಷ್ಠಿಯಿಂದ ಕೃಷಿ ಉಪನಿರ್ದೇಶಕರ ಕಚೇರಿಗೆ ಶಂಕು ಸ್ಥಾಪನೆ ಮಾಡಲಾಗಿದೆ ಎಂದರು.
ಒಂದು ಕೋಟಿ 57 ಲಕ್ಷ ರೂ ವೆಚ್ಚದಲ್ಲಿ ನಬಾರ್ಡ ಪ್ರಾಯೋಜಕತ್ವದಲ್ಲಿ ಆರ್.ಐ.ಡಿ.ಎಫ್ 27 ಯೋಜನೆ ಅಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಈ ಕಟ್ಟಡ ನಿರ್ಮಾಣವಾಗಲಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆ ಪೂರಕ ಎಲ್ಲ ಕಚೇರಿಗಳು ಇದ್ದಂತೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪೂರಕ ಎಲ್ಲ ಕಚೇರಿ ಮಾಡುವ ಗುರಿ ಹೊಂದಲಾಗಿದೆ ಎಂದರು.
2013 ರಲ್ಲಿ ಶಾಸಕರಾದ ನಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ 53 ಎಕರೆ ಜಾಗ ಮಂಜೂರಾತಿ ಪಡೆದಿದ್ದೇವೆ. ಈಗ ಅದರಲ್ಲಿ ಮೂರು ಎಕರೆ ಜಾಗದಲ್ಲಿ ಕೃಷಿ ಉಪನಿರ್ದೇಶಕರ 2 ಕಚೇರಿ ಕಟ್ಟಲಾಗುತ್ತಿದೆ ಎಂದರು.
ಕರ್ನಾಟಕದಲ್ಲಿ ಬೆಳೆಯುವ ನಿಂಬೆಗೆ ಇಂಡಿ ನಿಂಬೆ ಎಂದು ಜಿ.ಐ. ಟ್ಯಾಗ ಎಂದು ಸಧ್ಯದಲ್ಲಿಯೇ ದೊರೆಯಲಿದ್ದು ಇಂಡಿ ನಿಂಬೆ ಎಂದು ಬ್ಯ್ರಾಂಡ ದೊರೆಯಲಿದೆ ಎಂದರು.
ಇಂಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಪ್ರೇಮಾ ಪಾಟೀಲ ಮಾತನಾಡಿ, ಇಂಡಿಯಲ್ಲಿಯೇ ಮಣ್ಣು ಮತ್ತು ನೀರು ಪರೀಕ್ಷೆ ಕಾರ್ಯ ಪ್ರಾರಂಭವಾಗಿದೆ. ಸಸ್ಯಗಳಿಗೆ ಬೇಕಾಗುವ ಲಘು ಪೋಷಕಾಂಶಗಳು ವಿಜ್ಞಾನ ಕೇಂದ್ರದಲ್ಲಿ ದೊರೆಯುತ್ತಿವೆ ಎಂದರು.
ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ.ಎಲ್, ಇಂಡಿ ಕೃಷಿ ವಿಜ್ಞಾನ ಕೇಂದ್ರದ ಸಂತೋಷ ಶಿಂಧೆ ಜಾನುವಾರುಗಳಿಗೆ ಚರ್ಮರೋಗದ ಕುರಿತು, ಪ್ರಾಧ್ಯಾಪಕಿ ವಿಜ್ಞಾನಿ ಹೀನಾ ನಿಂಬೆ ಬೆಳೆಗೆ ರೋಗದ ಕುರಿತು ಮಾತನಾಡಿದರು.
ವೇದಿಕೆಯ ಮೇಲೆ ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ದಾನಮ್ಮಗೌಡತಿ ಪಾಟೀಲ, ಸಂಬಾಜಿರಾವ ಮಿಸಾಳೆ, ರಾಜಶೇಖರ ನಿಂಬರಗಿ, ಮುದ್ದುಗೌಡ ಪಾಟೀಲ, ಹಿರೇಬೇವನೂರದ ಭೀಮರಾಯಗೌಡ ಪಾಟೀಲ, ಭೀಮಣ್ಣ ಕವಲಗಿ, ಬಾಗವಾನ ಅಲ್ಪ ಸಂಖ್ಯಾತ ಬ್ಯಾಂಕಿನ ಸತ್ತಾರ ಬಾಗವಾನ, ಪ್ರಶಾಂತ ಕಾಳೆ, ಜಾವೇದ ಮೋಮೀನ್, ಕೆಪಿಸಿಸಿ ಸದಸ್ಯ ಮಲ್ಲನಗೌಡ ಬಿರಾದಾರ, ಶಾಂತು ಧನಶೆಟ್ಟಿ ಮತ್ತಿತರಿದ್ದರು.
ಧನರಾಜ ಮುಜಗೊಂಡ ನಿರೂಪಿಸಿ, ವಂದಿಸಿದರು.