ನೇಕಾರರಿಗೆ ಅನ್ಯಾಯ: ಅನಿರ್ಧಿಷ್ಟ ಕಾಲ ಮುಷ್ಕರ
ಗುಳೇದಗುಡ್ಡ 12: ಪಟ್ಟಣದ ಗಜಾನನ ಸಹಕಾರಿ ಸಂಘ 2005 ರಲ್ಲಿ ಪ್ರತಿ ನೇಕಾರರಿಗೆ ರೂ. 8 ಸಾವಿರ ದಂತೆ 106 ಜನ ನೇಕಾರರಿಂದ ಹಣ ಪಡೆದು ಸ.ನಂ. 118/1 ರಲ್ಲಿ ನಿವೇಶನ ಪತ್ರ ನೀಡಿಲ್ಲ. 16 ವರ್ಷಗಳಿಂದ ಸಂಘದ ಅಧ್ಯಕ್ಷರು ನೇಕಾರರಿಗೆ ಮೋಸ ಮಾಡಿದ್ದಾರೆ ಎಂದು ಇಲ್ಲಿನ ಹಿರಿಯ ನಾಗರಿಕರ ಪ್ರಜಾಜಾಗೃತ ವೇದಿಕೆಯ ಅಧ್ಯಕ್ಷ ವಿ.ಜಿ.ಮ್ಯಾಗಿನಹಳ್ಳಿ ಆರೋಪಿಸಿದ್ದಾರೆ.
ಅವರು ಸೋಮವಾರ ಪಟ್ಟಣದ ಕಮತಗಿ ಸರ್ಕಲ್ದಲ್ಲಿ ಅನಿರ್ಧಿಕಾಲ ಧರಣಿ ಸತ್ಯಾಗ್ರಹ ಕೈಕೊಂಡು ಮಾತನಾಡಿ, ಮೇಲಿನ ಪ್ರಕರಣದಂತೆ, ಸ.ನಂ.157/3 ರಲ್ಲಿ 66 ಜನ ನೇಕಾರರಿಂದ 2005-06 ರಲ್ಲಿ ತಲಾ ಅಂದಾಜು ರೂ. 25 ಸಾವಿರ ಪಡೆದು ಜವಳಿ ಇಲಾಖೆಯಿಂದ ರೂ. 50 ಸಾವಿರ ಸಹಾಯಧನದೊಂದಿಗೆ ಫಲಾನುಭವಿಗಳಿಗೆ ಸೌಲಭ್ಯವದಗಿಸಿಕೊಡುವುದಾಗಿ ಹೇಳಿ ಮತ್ತೊಂದು ಅನ್ಯಾಯ ಮಾಡಿದ್ದಾರೆ. ಇಂದಿಗೂ ಆ ನೇಕಾರರಿಗೂ ಸೌಲಭ್ಯ ಒದಗಿಸಿಲ್ಲ. ಈ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಸಲ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಬೇಟಿಯಾಗಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಉಪಮುಖ್ಯಮಂತ್ರಿ ಗೋವಿಂದ ಕಾರ್ಜೋಳ ಹಾಗೂ ವಸತಿ ಸಚಿವರಿಗೂ 6 ತಿಂಗಳ ಹಿಂದೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಬಡನೇಕಾರರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ತಪ್ಪಿತಸ್ಥರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆ ಈಡೇರುವರೆಗೆ ಸತ್ಯಾಗ್ರಹ ಮುಂದುವರೆಯುತ್ತದೆ ಎಂದು ಅವರು ಹೇಳಿದರು.
ಧರಣಿಯಲ್ಲಿ ಸದಸ್ಯ ಎಸ್.ಎಸ್.ಮಾಮನಿ, ಬಸವಲಿಂಗಪ್ಪ ಇಂಡಿ, ವೀರ್ಪ ಬೇವಿನಮರದ, ಎಸ್.ಬಿ.ಹೊಕ್ರಾಣಿ, ಈರಮ್ಮ ಗಡಾದ, ಲಕ್ಷ್ಮೀಬಾಯಿ ರೂಡಗಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ತಹಸೀಲ್ದಾರರ ಭೇಟಿ: ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಧರಣಿನಿರತ ನೇಕಾರರ ಸಮಸ್ಯೆಗಳನ್ನು ಆಲಿಸಿದರು. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಆದರೂ ಧರಣಿ ನಿರತ ನೇಕಾರರು ಹಾಗೂ ಮುಖಂಡರು ಧರಣಿ ಅಂತ್ಯಗೊಸಳಿಸಲಿಲ್ಲ. ತಮಗೆ ನಿವೇಶನ ಪತ್ರ ಬಂದರೆ ಮಾತ್ರ ಧರಣಿ ನಿಲ್ಲಿಸುವುದಾಗಿ ಹೇಳಿದರು.