ಮೇಘನಾ ರಾಜ್ ಕ್ಷಮೆ ಕೋರಿದ ಇಂದ್ರಜಿತ್
ಬೆಂಗಳೂರು, ಸೆಪ್ಟೆಂಬರ್ 05: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಇಂದ್ರಜಿತ್ ಲಂಕೇಶ್ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ.
ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೋರುವಂತೆ ಮೇಘನಾ ರಾಜ್ ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿಗೆ ಹಾಜರಾದ ಅವರು, ತಮ್ಮ ಮಾತಿನಿಂದ ಮೇಘನಾ ಕುಟುಂಬಕ್ಕೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದರು,
ಚಿರಂಜೀವಿ ಸರ್ಜಾ ಅಕಾಲಿಕವಾಗಿ ಮರಣ ಹೊಂದಿದ್ದು ನೋಡಿದಾಗ ಮನದಲ್ಲಿ ಒಂದಷ್ಟು ವಿಚಾರ ಮೂಡಿದ್ದು ನಿಜ. ಹೀಗಾಗಿ ಆ ಪದಗಳನ್ನು ಆಡಿದ್ದೆ. ಅಲ್ಲದೆ ಆಡಿದ ಮಾತನ್ನೂ ವಾಪಸ್ ತೆಗೆದುಕೊಂಡಿದ್ದೆ. ಆದಾಗ್ಯೂ ಮೇಘರಾಜ್ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುವ ಕಾರಣ ಬಹಿರಂಗವಾಗಿ ಕ್ಷಮೆ ಕೋರುತ್ತಿದ್ದೇನೆ ಎಂದರು.
ಇಂದ್ರಜಿತ್ ಲಂಕೇಶ್ ಮಾತಿನಿಂದ ತಮ್ಮ ಮನಸ್ಸಿಗೆ ತೀವ್ರ ನೋವಾಗಿದ್ದು, ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಮೇಘನಾ ರಾಜ್ ಕರ್ನಾಟಕ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು.
ಯುವ ನಟ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.
“ಯುವ ನಟ ಕೇವಲ 32 ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದಾಗ ಯಾರಿಗಾದರೂ ಸಂಶಯ ಬರುವುದು ಅಥವಾ ನೋವಾಗುವುದು ಸಹಜ. ಆದರೆ ಡ್ರಗ್ಸ್ ಮಾರಾಟ ಜಾಲಕ್ಕೂ ಚಿರಂಜೀವಿಗೂ ಸಂಬಂಧವಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ” ಎಂದು ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದರು.