ರಾಣೆಬೆನ್ನೂರ

ಆರೋಗ್ಯ ಸಂರಕ್ಷಣೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವವಿದೆ: ಡಾ. ಶಿವಪ್ರಕಾಶ ತಂಡಿ

ಆರೋಗ್ಯ ಸಂರಕ್ಷಣೆಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವವಿದೆ: ಡಾ. ಶಿವಪ್ರಕಾಶ ತಂಡಿ

 

          ರಾಣೆಬೆನ್ನೂರ 08 : ಆರೋಗ್ಯ ಸಂರಕ್ಷಣೆಗೆ   ನಮ್ಮ ಸಂಸ್ಕೃತಿಯಲ್ಲಿ   ಮಹತ್ವದ ಸ್ಥಾನವಿದೆ. ಆರೋಗ್ಯ ಸದೃಢವಾಗಿರಬೇಕಾದರೆ ಉತ್ತಮ ಜೀವನಶೈಲಿ ಹಾಗೂ ಶಿಸ್ತುಬದ್ಧ ಜೀವನದ ದಿನಚರಿ ಅಳವಡಿಸಿಕೊಳ್ಳುವುದು ಅತ್ಯಗತ್ಯ . ಧನ ಸಂಪತ್ತಿಗಿಂತ ಆರೋಗ್ಯ ಸಂಪತ್ತು ದೊಡ್ಡದು ಎಂದು ಡಾ. ಶಿವಪ್ರಕಾಶ ತಂಡಿ ಹೇಳಿದರು.

          ಅವರು ಇಲ್ಲಿನ  ಮಾರುತಿ ನಗರದ ಶ್ರೀರಾಮ ಮಂದಿರದಲ್ಲಿ, ರಾಣೇಬೆನ್ನೂರು ಆರೋಗ್ಯ ಭಾರತಿ, ಧನ್ವಂತರಿ ಜಯಂತೋತ್ಸವದ ನಿಮಿತ್ತ  ಆಯೋಜಿಸಿದ್ದ, ಆರೋಗ್ಯ ರಕ್ಷಣಾ ಜಾಗೃತಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಋಷಿ ಮುನಿಗಳು ಪ್ರಾಚೀನ ಕಾಲದಿಂದಲೂ ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಿದ್ದರು.

              ಇಂದಿನ ದಿನಗಳಲ್ಲಿಯೂ ಯೋಗ,ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮತ್ತು ಯೋಗವನ್ನು ನಿತ್ಯದ ಬದುಕಿನಲ್ಲಿ  ದಿನಚರಿಯ ಭಾಗವಾಗಿಸಿಕೊಳ್ಳಬೇಕು. ಎಂದು ಕರೆ ನೀಡಿದರು. ಹಿಂದೂ ಹಾಗೂ ಸನಾತನ ಧರ್ಮದ ಪೂಜೆ, ಪುನಸ್ಕಾರ ಮತ್ತು ಸಂಸ್ಕಾರ ಪದ್ಧತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಲಭಿಸುತ್ತದೆ.

            ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಅನಗತ್ಯ ಓಷಧೋಪಚಾರಗಳಿಂದ ದೂರವಿರಬಹುದು ಎಂದರು. ಡಾ. ಮುರಳಿಕೃಷ್ಣ ಮಾತನಾಡಿ, ಮನುಷ್ಯನ ದೇಹದ ಎಲ್ಲ ಅಂಗಾಠಗಳು ಸದೃಢವಾಗಿರಬೇಕಾದರ,ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.

           ವ್ಯಕ್ತಿಯ ವೃತ್ತಿ, ಪ್ರವೃತ್ತಿ ಹಾಗೂ ಜೀವನಶೈಲಿಗೆ ಅನುಗುಣವಾಗಿ ದೇಹ ಮತ್ತು ಆರೋಗ್ಯದಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಜೀವನಶೈಲಿಯೇ ಆರೋಗ್ಯದ ಪ್ರಮುಖ ಗುಟ್ಟು. ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಆರೋಗ್ಯಕರ ಜೀವನ ನಡೆಸಬೇಕು. ಸ್ವಸ್ಥ ಕುಟುಂಬ ನಿರ್ಮಾಣಕ್ಕಾಗಿ ಆರೋಗ್ಯ ಭಾರತಿ ಹಗಲಿರುಳು ಶ್ರಮಿಸುತ್ತಿದೆ ಎಂದರು.

           ಜಗದೀಶ ಮಹಾರಾಜಪೇಟೆ ಮಾತನಾಡಿ, ಹಣ, ಉದ್ಯೋಗ ಮತ್ತು ವೃತ್ತಿಜೀವನದ ಹಿಂದೆ ಓಡುವ ಭರದಲ್ಲಿ ಮನುಷ್ಯ ಆಹಾರ ಪದ್ಧತಿ ಹಾಗೂ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುತ್ತಿದ್ದಾನೆ. ತಾಳ್ಮೆ ಕಳೆದುಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಪ್ರಾಣಾಯಾಮ, ಧ್ಯಾನ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಲುಷಿತ ವಾತಾವರಣದಲ್ಲಿ ಬದುಕುತ್ತಿರುವ ನಾವು ಪರಿಸರದ ರಕ್ಷಣೆಗೆ ಮುಂದಾಗಬೇಕು.

             ಜೀವನದಲ್ಲಿ ಸಾಧನೆ ಮಾಡುವುದರ ಜತೆಗೆ ಪರೋಪಕಾರದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ವೇಳೆ ನಗರದ ಖ್ಯಾತ ವೈದ್ಯ ಡಾ. ಎಸ್‌.ಎಸ್‌. ಬಣಕಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ 45 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಸೇವಾ ಕಾರ್ಯಕ್ಕೆ ಶಕ್ತಿ, ಅವಕಾಶ, ಕುಟುಂಬದ ಬೆಂಬಲ ಹಾಗೂ ದೇವರ ಆಶೀರ್ವಾದ, ಜನರ ಶುಭ ಹಾರೈಕೆ ಕಾರಣವಾಗಿವೆ.

            ಧರ್ಮಪತ್ನಿ ಮತ್ತು ಮಕ್ಕಳ ಸಹಕಾರದಿಂದ ಸೇವಾ ಕಾರ್ಯದಲ್ಲಿ ತೃಪ್ತಿ ಕಂಡಿದ್ದೇನೆ. ನನ್ನ ಪ್ರತಿಯೊಂದು ಕ್ಷಣವನ್ನೂ ಬಡವರು ಹಾಗೂ ಸಮಾಜದಲ್ಲಿ ಹಿಂದುಳಿದವರ ಸೇವೆಗೆ ಮೀಸಲಿಟ್ಟಿದ್ದೇನೆ ಎಂದರು.  ಕಾರ್ಯಕ್ರಮದಲ್ಲಿ ಪಾಂಡುರಂಗ ಪೂಜಾರ, ವಿ.ಆರ್‌. ಭಟ್, ಅಶೋಕ ನಾಡಿಗೇರ, ರತ್ನಾ ಎಸ್‌. ಬಣಗಾರ, ಪರಶುರಾಮ ಚಲವಾದಿ, ಸಂದೀಪ ಕುರ್ಡೇಕರ್, ಮಾಯಾ ಕುಬಸದ, ಮಂಜುನಾಥ ಜ್ಯೋತಿ, ಶಶಿಕಲಾ ಬಡೆಂಕಲ್ , ಮಂಜುಳಾ ಹರಿಹರ , ಮೃತ್ಯುಂಜಯ ಗೂಳೇರ ಸೇರಿದಂತೆ ಮತ್ತಿತರರು  ಇದ್ದರು. 


ಸುದ್ದಿ ಓದಿ