ಶಿರಗುಪ್ಪಿ ಸಕ್ಕರೆ ಕಾರ್ಖಾನೆಯಲ್ಲಿ ಸ್ವಾತಂತ್ರ್ಯೋತ್ಸವ
ಶೇಡಬಾಳ : 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಬರುವ ಹಂಗಾಮಿನಲ್ಲಿ ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆಯು 7.5 ಲಕ್ಷಕ್ಕಿಂತ ಮೇಲ್ಪಟ್ಟು ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿದರು.
ಅವರು ರವಿವಾರ ದಿ. 15 ರಂದು ಕಾಗವಾಡ ಗ್ರಾಮದಲ್ಲಿನ ಶಿರಗುಪ್ಪಿ ಶುಗರ ವರ್ಕ್ಸ ಸಕ್ಕರೆ ಕಾರ್ಖಾನೆಯಲ್ಲಿ ಜರುಗಿದ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡುತ್ತಾ ಇತ್ತೀಚಿಗೆ ಜರುಗಿದ ನೆರೆಹಾವಳಿಯಿಂದ ನದಿ ತೀರದ ರೈತರು ಸಾಕಷ್ಟು ಬೆಳೆ ಹಾನಿಯನ್ನು ಅನುಭವಿಸಿದ್ದಾರೆ. ನೀರಿನಲ್ಲಿ ಮುಳುಗಿ ಹೋಗಿರುವ ರೈತರ ಕಬ್ಬಿಗೆ ಯೋಗ್ಯ ಬೆಲೆ ನೀಡಿ ನುರಿಸಲಾಗುವುದೆಂದು ಭರವಸೆ ನೀಡಿದರು. ಕೋವಿಡ್-19 ಹಾಗೂ ನೆರೆ ಹಾವಳಿಯಿಂದ ಕಳೆದ 2 ವರ್ಷದಿಂದ ರೈತರು ಸಾಕಷ್ಟು ಆರ್ಥಿಕ ತೊಂದರೆಗಳನ್ನು ಅನುಭವಿಸಿದ್ದಾರೆ. ರೈತರ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದೇ ನಮ್ಮ ಸಕ್ಕರೆ ಕಾರ್ಖಾನೆಯ ಮುಖ್ಯ ಗುರಿಯಾಗಿದೆ. 2020-21 ನೇ ಸಾಲಿನ ಹಂಗಾಮಿನಲ್ಲಿ ರೈತರು ಸಕ್ಕರೆ ಕಾರ್ಖಾನೆಗೆ ಕಳುಹಿಸುವ ಕಬ್ಬಿಗೆ ಸುತ್ತಮುತ್ತಲಿನ ಸಕ್ಕರೆ ಕಾರ್ಖಾನೆಗಳು ನೀಡುವ ದರದ ಅನುಗುಣವಾಗಿ ತಾವು ಕೂಡ ಕಬ್ಬಿಗೆ ಯೋಗ್ಯ ಬೆಲೆ ನೀಡಲಾಗುವುದು ಕಾರಣ ಕಬ್ಬು ಬೆಳೆಗಾರರು ಅಧಿಕ ಪ್ರಮಾಣದಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸುವಂತೆ ಹೇಳಿದರು.
ಇದೇ ಸಮಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಸುಧೀರ ವಿರೋಜೆ, ಕೋಮಲ ಚೌಗಲಾ, ಸಂತೋಷ ಉಗಾರೆ, ರಮೇಶ ಟೊಣ್ಣೆ, ಜೀತೇಂದ್ರ ಪಾಟೀಲ, ಕಿರಣ ಜಾಧವ, ಖಲೀಲ ಮಸರಗುಪ್ಪಿ, ರಾಜಕುಮಾರ ದರಿಬೆ, ವಿನಾಯಕ ಚೌಗಲೆ, ಸುಭಾಷ ಕುರಬರ, ಪ್ರಫುಲ ಪೂಜಾರಿ ಮೊದಲಾದವರನ್ನು ಕಾರ್ಖಾನೆಯ ವತಿಯಿಂದ ಶಾಲು ಹೊದಿಸಿ ಸತ್ಕರಿಸಿ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಶಿರಗುಪ್ಪಿ ಶುಗರ್ಸನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಲ್ಲಪ್ಪಣ್ಣ ಮಗೆಣ್ಣವರ, ಉಪಾಧ್ಯಕ್ಷ ಅರುಣ ಪರಾಂಡೆ, ನಿರ್ದೇಶಕರಾದ ಮಹಾವೀರ ಸುಗಣ್ಣವರ, ಮ್ಯಾನೇಜರ ವೀರೇಂದ್ರ ಜಾಡರ, ಮುಖ್ಯ ಅಭಿಯಂತರ ವಿಜಯಕುಮಾರ ನಾಗಾಂವೆ, ಪ್ರೇಮಪಾಲ ಸಿಂಗ್, ಎಚ್.ಎನ್. ಜಗದೀಶ, ತಾಯ್ಯಬಾಯಿ ಇಂಚಲಕರಂಜಿ, ಕುಶಾಲ ಮಗೆಣ್ಣವರ, ಡಿಜಿಎಂ ಯಳಗೂಡ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕರು, ಕಬ್ಬು ಬೆಳೆಗಾರರು, ಗ್ರಾಮಸ್ಥರು ಹಾಜರಿದ್ದರು.