ಅರಣ್ಯ ನಾಶದಿಂದ ಹೆಚ್ಚಾಗುತ್ತಿದೆ ಹವಾಮಾನ ವೈಪರಿತ್ಯ: ಪಾಟೀಲ
ರಾಣಿಬೆನ್ನೂರ 16: ಮನುಷ್ಯ ಆಧುನಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಸ್ತುತ ಭೂಮಿಯ ಮೇಲಿನ ಅರಣ್ಯ ಪ್ರದೇಶವನ್ನು ನಾಶ ಮಾಡುತ್ತಿದ್ದು, ಇದರಿಂದ ಕಾಲ ಕಾಲಕ್ಕೆ ಮಳೆ ಸರಿಯಾಗಿ ಆಗುತ್ತಿಲ್ಲ. ಹವಾಮಾನ ವೈಪರಿತ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರವೆಂದರೆ ಭೂತಾಯಿಗೆ ಹಸಿರು ಸೀರೆ ಉಡಿಸುವುದು ಅನಿವಾರ‌್ಯವಾಗಿದೆ ಎಂದು ಪ್ರಧಾನ ಗುರು ಮಾತೆ ಎನ್.ಎಸ್. ಪಾಟೀಲ ಹೇಳಿದರು.
ತಾಲೂಕಿನ ಎರೆಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮನೆ ಸುತ್ತಮುತ್ತಲಿರುವ ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಬೇಕು. ಪ್ರತಿಯೊಬ್ಬ ಮಕ್ಕಳು ತಮ್ಮ ಮನೆಯ ಸುತ್ತ ಮುತ್ತ ಸಸಿ ನೆಟ್ಟು ಅವುಗಳನ್ನು ಪಾಲನೆ ಪೋಷಣೆ ಮಾಡಿದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದರು.
ಪಾಲಕರಾದ ಗುರುನಾಥರೆಡ್ಡಿ ಮೇವುಂಡಿ, ಮಂಜುನಾಥ್ ಬಡಿಗೇರ, ವೇದಾವತಿ ಬಡಿಗೇರ, ಎಂ.ಜಿ. ತೋಟದ, ಎಸ್.ಸಿ. ಇಂದುಮತಿ, ಎಸ್.ಬಿ. ನೆಗಳೂರ, ಅನುರಾಧ ಎಮ್.ಎಚ್, ಅಡುಗೆ ಸಿಬ್ಬಂದಿಗಳು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.