ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟನೆ
ರಾಣಿಬೆನ್ನೂರ 08: ಮನುಷ್ಯನು ತನ್ನ ಜೀವಿತ ಅವಧಿಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಹಣ ಆಸ್ತಿ ಗಳಿಸಬೇಕು. ಇದರಿಂದ ಆತ ಜೀವನದುದ್ದಕ್ಕೂ ಸಂತೃಪ್ತನಾಗಿರುತ್ತಾನೆ. ಇದನ್ನು ಬಿಟ್ಟು ಅಗತ್ಯತೆಗಿಂತ ಹೆಚ್ಚಿನದನ್ನು ಗಳಿಸಿದರೆ ಅದು ಪಾಪದ ಗಂಟೆ ಆಗುತ್ತದೆ. ಅದರ ಬದಲು ಗಳಿಸಿದ ಹಣದಲ್ಲಿ ಸ್ವಲ್ಪ ಪ್ರಮಾಣದ ಹಣವನ್ನು ಪುಣ್ಯ ಕಾರ್ಯಗಳಿಗೆ ದಾನ ಮಾಡಬೇಕು ಎಂದು ರಾಮಕೃಷ್ಣ ಸ್ವಾಮಿ ವಿವೇಕಾಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದ ಮಹಾರಾಜ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ನಟ ದಿ.ಡಾ. ರಾಜಕುಮಾರ್ ಜನ್ಮದಿನದ ಪ್ರಯುಕ್ತ ಶಂಕರ್ ಕಣ್ಣಿನ ಆಸ್ಪತ್ರೆ ಡಾ. ರಂಜನಾ ನಾಯಕ ಮೆಮೋರಿಯಲ್ ಫೌಂಡೇಶನ್, ಸ್ವಾಕರವೇ, ಎನ್ಎಸ್ ಸ್ನೇಹ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಲಯನ್ಸ್ ಸಂಸ್ಥೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವುಗಳ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಣ ಗಳಿಸುವುದೇ ಜೀವನದ ಮುಖ್ಯ ಉದ್ದೇಶವಾಗಬಾರದು, ಅದನ್ನು ಸದ್ಬಳಕೆ ಮಾಡುವುದೇ ನಿಜವಾದ ಜೀವನ, ಈ ಭೂಮಿಯ ಮೇಲೆ ಗಳಿಸಿಟ್ಟವರು ಯಾರೂ ಉಳಿದಿಲ್ಲ. ಕೇವಲ ದಾನಿಗಳು ಉಳಿದಿದ್ದಾರೆ. ಸದ್ಬಳಕೆ ಮಾಡಿದವರು ಇದ್ದಾರೆ. ಗಳಿಸಿಟ್ಟ ಹಣ ಯಾವಾಗಲೂ ಕುತ್ತು. ಇದರಿಂದ ಮಾನಸಿಕ ನೆಮ್ಮದಿ ಸಿಗಲಾರದು ಎಂದರು.
ಜಿಪುಣನಾದರೂ ಸಹ ಕೊನೆಗೆ ತಾನು ಗಳಿಸಿಟ್ಟ ಹಣ, ಆಸ್ತಿ ಹಾಗೆಯೇ ಬಿಟ್ಟು ಹೋದರೆ ಆತ ಮಾಡಿದ ಪರಿಶ್ರಮವಾದರೂ ಏನು? ಅಕ್ರಮ ಆಸ್ತಿ, ಹಣ ಗಳಿಸಿದರೆ ಅದಕ್ಕೆ ಅರ್ಥವಿಲ್ಲ. ಹಣ ಗಳಿಸುವಾಗ ಇರುವ ಮನಸ್ಸು ಬಳಸುವಾಗಲೂ ಇರಬೇಕು. ಇದ್ದಾಗ ಸಮಾಜಕ್ಕೆ ಪುಣ್ಯದಂತಹ ಕಾರ್ಯ ಮಾಡಿ, ಜೀವನ ಉತ್ತಮಪಡಿಸಿಕೊಂಡರೆ ಅದು ಸಾರ್ಥಕ ಜೀವನ. ಇಂತಹ ಪುಣ್ಯದ ಕಾರ್ಯಗಳನ್ನು ಸಂಘ ಮತ್ತು ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರು 100 ಕ್ಕೂ ಅಧಿಕ ಜನರ ನೇತ್ರ ನೇತ್ರ ತಪಾಸಣೆ ನಡೆಸಿ ಸೂಕ್ತ ಸಲಹೇ ನೀಡಿದರು.
ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಗಚ್ಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ನಾಯಕ, ನಾಗರಾಜ ಮಾಕನೂರ, ನಾಗರಾಜ ನಲವಾಗಲ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಯಮ್ಮಿ, ಸಂಜೀವ ಕನವಳ್ಳಿ, ಸಂತೋಷ ಕನ್ನಪ್ಪಳವರ, ಕುಮಾರ ನಂದಿತಾವರಿ, ಪ್ರಕಾಶ ದಾಸಪ್ಪನವರ, ಮಂಜುನಾಥ ಕುಡಪಲಿ, ಪ್ರದೀಪ ದಾಸಪ್ಪನವರ, ನವೀನ ಮಡಿವಾಳರ ಮತ್ತು ಗ್ರಾಮದ ಮುಖಂಡರು ಇದ್ದರು.