ರಾಣೆಬೆನ್ನೂರ

ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

ರಾಣೇಬೆನ್ನೂರು:24 ನಗರವನ್ನು ಸ್ವಚ್ಚವಾಗಿಡುವ  ಪೌರಕಾರ್ಮಿಕರು ಆರೋಗ್ಯವಾಗಿ ಇದ್ದರೆ ಮಾತ್ರ ನಗರದ ಸಾರ್ವಜನಿಕರು  ಆರೋಗ್ಯವಾಗಿ ಇರುತ್ತಾರೆ ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.  

ಸೋಮವಾರದಂದು ಇಲ್ಲಿ ವರ್ತಕರ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ನಡೆದ  ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ರೋಗ-ರುಜಿನಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ವೈಧ್ಯಾದಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೌರ ಕಾರ್ಮಿಕರು ಚೆನ್ನಾಗಿರಬೇಕು. ಒಂದು ವಾರ ರಜೆ ಹಾಕಿದರೆ ಎಲ್ಲಾ ಬೀದಿಗಳು ಗಬ್ಬು ನಾರುತ್ತವೆ. ಪ್ರತಿಯೊಬ್ಬರು ಅವರನ್ನು ಗೌರವಿಸುವುದರ ಜೊತೆಗೆ ಪ್ರೀತಿ, ವಿಶ್ವಾಸದಿಂದ ಕಾಣಬೇಕು ಎಂದರು.  

ಪೌರ ಕಾರ್ಮಿಕರು ವಿದ್ಯಾವಂತರಾಗಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ಅಕ್ಷರದಿಂದಲೇ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಶಿಕ್ಷಣ ಮತ್ತು ಆರೋಗ್ಯದ ಕಡೆ ಹೆಚ್ಚು ಗಮನವನ್ನು ಕೊಡಬೇಕು. ಕಾರ್ಮಿಕರ ಯೋಗ ಕ್ಷೇಮಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಹಕ್ಕುಗಳನ್ನು ಕಾಪಾಡಲು ಕಾಯಿದೆಗಳು ಜಾರಿಗೆಯಲ್ಲಿವೆ. ತಮಗೆ ಅನ್ಯಾಯವಾದಾಗ ಪಡೆಯುವ ಹಕ್ಕು ಇದೆ ಎಂದರು  

ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಪೌರ ಕಾರ್ಮಿಕರು ಕಾಯಕಯೋಗಿಗಳು ಅವರು ಮಳೆ, ಗಾಳಿ, ಚಳಿ ಎನ್ನದೆ ನಗರದ ಸ್ವಚ್ಚತೆ ಕಡೆ ಗಮನ ಹರಿಸುತ್ತಾರೆ. ಪ್ರದೇಶ ಸುಂದರವಾಗಿ ಕಾಣಲು ಪೌರ ಕಾರ್ಮಿಕರ ಸೇವೆ ಮುಖ್ಯ. ರಾಜ್ಯದಲ್ಲಿಯೇ ಮಾದರಿ ನಗರಸಭೆ ಎಂದು ಹೆಸರುವಾಸಿಯಾಗಲು ಸ್ವಚ್ಚತೆಯೇ ಕಾರಣ. ಪೌರ ಕಾರ್ಮಿಕರು ಮುಂಜಾನೆ ಸಮಯದಲ್ಲಿ ಶ್ರದ್ಧೆ.ಪ್ರಾಮಾಣಿಕತೆಯಿಂದ ಕೆಲಸ ಮಾಡಿರುವುದೆ ಇದಕ್ಕೆ ಉತ್ತಮ ಉದಾಹರಣೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಕಾರ್ಯ ಶ್ಲ್ಯಾಘನೀಯ ಎಂದರು. 

ನಗರಸಭೆ ಪೌರಾಯುಕ್ತ ಫಕ್ಕೀರ​‍್ಪ ಇಂಗಳಗಿ, ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ, ಶೇಖಣ್ಣ ಹೊಸಗೌಡ್ರ, ಮಲ್ಲೇಶಪ್ಪ ಮೆಣಸಿನಹಾಳ, ಆರ್‌.ಎಂ.ಪಾಟೀಲ, ಗಂಗಮ್ಮ ಹಾವನೂರು,  ಸೌದಾಗಾರ, ಮೈಲಪ್ಪ ಸೇರಿದಂತೆ ನೂರಾರು ಪೌರ ಕಾರ್ಮಿಕರು ಇದ್ದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು. ನಂತರ ಕಲರ​‍್ಸ‌ ಕನ್ನಡ ಖಾಸಗಿ ವಾಹಿನಿ ಖ್ಯಾತ ಗಾಯಕಿ ಮಹನ್ಯ ಪಾಟೀಲ ಹಾಗೂ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನೋಡುಗರಲ್ಲಿ ಮನಸೋರೆಗೊಂಡಿತು. 


ಸುದ್ದಿ ಓದಿ