ರಾಣೆಬೆನ್ನೂರ

ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಉದ್ಘಾಟನೆ

ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಉದ್ಘಾಟನೆ

ರಾಣಿಬೆನ್ನೂರ 07:  ವೀರಶೈವ ಧರ್ಮದಲ್ಲಿ ಕಾಯಕ ಧರ್ಮಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕ್ರಿಯಾಶೀಲ ಬದುಕು ಶ್ರೇಯಸ್ಸಿಗೆ ಮೂಲ. ಸಮುದಾಯದ ಅಭಿವೃದ್ದಿಗೆ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. 

ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಿರ್ಮಿಸಿದ ಸ್ವಯಂಭು ಸೋಮೇಶ್ವರ ಮಾಂಗಲ್ಯ ಮಂದಿರ ಉದ್ಘಾಟಿಸಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಭಗವಂತನಿತ್ತ ಕೊಡುಗೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಆ ಭಗವಂತ ಕೊಟ್ಟಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ಮನುಷ್ಯನ ಧರ್ಮವಾಗಿದೆ ಎಂದು ನುಡಿದರು.  

ದುಡಿಮೆಯಿಲ್ಲದ ಮತ್ತು ಶ್ರಮ ಪಡದೇ ಸಂಪತ್ತು ಬಯಸುವವರು ಬಹಳ ಜನರಿದ್ದಾರೆ. ಶ್ರಮದಿಂದ ಸಂಪಾದಿಸಿದ ಸಂಪತ್ತು ಸುಖ ಶಾಂತಿ ತಂದು ಕೊಡಬಲ್ಲದು. ಶ್ರಮ ಪಡದ ಸಂಪತ್ತು ಶಾಶ್ವತವಲ್ಲ. ಆದ್ದರಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೃತ್ತಿಶ್ಚೈತನ್ಯ ರೂಪಿಣಿ ಎಂದು ಸಾರಿದ್ದಾರೆ. ಮನುಷ್ಯನಲ್ಲಿ ಅತಿಯಾದ ವೈಚಾರಿಕತೆ ಬೆಳೆದು ಧರ್ಮದಲ್ಲಿ ಶ್ರದ್ಧೆ ಹಿರಿಯರಲ್ಲಿ ಗೌರವ ಕೊಡದ ಜನರು ಹೆಚ್ಚುತ್ತಿದ್ದಾರೆ ಎಂದು ಹೇಳಿದರು. 

ಜೀವನೋತ್ಸಾಹಕ್ಕೆ ಯೋಗ್ಯ ಮಾರ್ಗದರ್ಶನ ಮತ್ತು ಸಂಸ್ಕಾರ ಕೊಟ್ಟರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಕಾಯಕ ಧರ್ಮ ಅನುಸರಿಸಿ ಭೌತಿಕ ಮಾರ್ಗದಲ್ಲಿ ನಡೆಯುವ ಜನ ಸಮುದಾಯಕ್ಕೆ ದಿಕ್ಸೂಚಿಯಾಗಿದ್ದಾರೆ. ಅವರ ಸರಳತೆ ಮತ್ತು ಮುಗ್ಧ ಮನೋಭಾವದಿಂದಾಗಿ ಭಕ್ತ ಸಂಕುಲದ ಸಂತೋಷಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿ ಶ್ರೀಗಳವರಿಗೆ ಪೀಠದಿಂದ ರೇಶ್ಮೆ ಮಡಿ ಫಲ ಪುಷ್ಪ ಸ್ಮರಣಿಕೆ ನೀಡಿ ಶುಭ ಹಾರೈಸಿದರು. 

ನೇತೃತ್ವ ವಹಿಸಿದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಹಿರೇಮಠದ ಇತಿಹಾಸದಲ್ಲಿ ಇವತ್ತಿನ ದಿನ ಅವಿಸ್ಮರಣೀಯವಾದ ಪವಿತ್ರ ದಿನವಾಗಿದೆ.  ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಲಿಂಗದಹಳ್ಳಿ ಹಿರೇಮಠದ ಅಭಿವೃದ್ಧಿ ಮಾಡಿರುವೆ. ಈ ಭಾಗದ ಭಕ್ತರಿಗೆ ಸಂಸ್ಕಾರ ಸದ್ವಿಚಾರಗಳನ್ನು ಮನೆ ಮನಕ್ಕೆ ಮುಟ್ಟಿಸಿದ ಸಂತೃಪ್ತ ಮನೋಭಾವ ನಮ್ಮದಾಗಿದೆ ಎಂದರು. 

ಕಣ್ವಕುಪ್ಪಿ ಗವಿಮಠದ ಡಾಽ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ರಟ್ಟಿಹಳ್ಳಿ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯರು, ನಾಗವಂದ ಹೊರಗಿನಮಠದ ಶಿವಾನಂದ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಹುಬ್ಬಳ್ಳಿಯ ಮಹಿಳಾ ಮಂಡಳದ ಸದಸ್ಯರಿಂದ ಭಕ್ತಿ ಗೀತೆ ಜರುಗಿತು. ಮಾಸೂರಿನ ಗುರುಪ್ರಸಾದ್ ಹಿರೇಮಠ ನಿರೂಪಿಸಿದರು. 


ಸುದ್ದಿ ಓದಿ