ಧಾರವಾಡ - ಹುಬ್ಬಳ್ಳಿ

ಹುಲ್ಲಂಬಿಯಲ್ಲಿ ಸೌರಶಕ್ತಿ ಆಧಾರಿತ ಸಮುದಾಯ ಸಿರಿಧಾನ್ಯ ಸಂಸ್ಕರಣ ಘಟಕ ಆರಂಭ

ಹುಲ್ಲಂಬಿಯಲ್ಲಿ ಸೌರಶಕ್ತಿ ಆಧಾರಿತ ಸಮುದಾಯ ಸಿರಿಧಾನ್ಯ ಸಂಸ್ಕರಣ ಘಟಕ ಆರಂಭ

ಧಾರವಾಡ 09:  ನಬಾರ್ಡ್‌ ಬ್ಯಾಂಕ್ ಪ್ರವರ್ತಿತವಾದ, ಕಲಘಟಗಿ ತಾಲೂಕಿನ ಹುಲ್ಲಂಬಿ ಗ್ರಾಮದ ಕೃಷಿ ಜ್ಯೋತಿ ರೈತ ಉತ್ಪಾದಕರ ಕಂಪನಿಯು ಧಾರವಾಡ ಸ್ಕೋಪ್ ಸಂಸ್ಥೆಯ ತಾಂತ್ರಿಕ ನೆರವು ಪಡೆದು ರೈತರ ಅಭಿವೃದ್ಧಿಗೋಸ್ಕರ ಕೆಲಸ ನಿರ್ವಹಿಸುತ್ತಿದೆ. 

ಈ ರೈತ ಉತ್ಪಾದಕರ ಕಂಪನಿ ತನ್ನ ಗುರಿಯಂತೆ 10 ಎಕರೆಯಿಂದ 100 ಎಕರೆಗೆ ಸಿರಿಧಾನ್ಯ ಬೆಳೆಯನ್ನು ಹುಲ್ಲಂಬಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಸ್ತರಿಸಿದೆ. ರೈತರು ಪಡೆದ ಸಿರಿಧಾನ್ಯವನ್ನು ಸಂಸ್ಕರಿಸಲು ನಿನ್ನೆ (ಜು.8) ರಿಂದ ಹುಲ್ಲಂಬಿ ಗ್ರಾಮದಲ್ಲಿ ಸೌರಶಕ್ತಿ ಆಧಾರಿತ ಸಮುದಾಯ ಸಿರಿಧಾನ್ಯ ಸಂಸ್ಕರಣ ಘಟಕವನ್ನು ಆರಂಭಿಸಿದೆ. 

ಈ ಘಟಕ ಸ್ಥಾಪನೆಗೆ ಬೆಂಗಳೂರಿನ ಸೋಲ್ಕೋ ಪ್ರತಿಷ್ಠಾನ ಸಹಾಯ ಒದಗಿಸಿದ್ದು ಕೃಷಿ ಜ್ಯೋತಿ ರೈತ ಉತ್ಪಾದಕರ ಕಂಪನಿಯು, ಸಂಸ್ಕರಣ ಘಟಕದ ನಿರ್ವಹಣೆಯನ್ನು ಶ್ರೀ ದುರ್ಗಾದೇವಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವಹಿಸಿದೆ. 

ಈ ಘಟಕ ಸ್ಥಾಪನೆಗೆ ಸುಮಾರು ರೂ.10 ಲಕ್ಷ ವೆಚ್ಚವಾಗಿದ್ದು, ಮಹಿಳೆಯರಿಗೆ ಘಟಕವನ್ನು ನಿರ್ವಹಿಸಲು ತರಬೇತಿಯನ್ನು ಸಹಜ ಸಮೃದ್ಧ ಸಂಸ್ಥೆಯು ನೀಡಿದೆ. ಘಟಕವು ಪ್ರತಿ ದಿನ 5 ರಿಂದ 6 ಕ್ವಿಂಟಾಲ್ ದಷ್ಟು ಸಿರಿಧಾನ್ಯಗಳನ್ನು ಸಂಸ್ಕರಿಸುವ ಸಾಮಥ್ರ್ರ್ಯ ಹೊಂದಿದೆ. 

ಘಟಕ ಉದ್ಘಾಟನೆ, ನಬಾರ್ಡ್‌ ಧಾರವಾಡ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಅವರು ಮಾತನಾಡಿ, ರೈತರು ಈ ಸಂಸ್ಕರಣ ಘಟಕದ ಉಪಯೋಗ ಮಾಡಿಕೊಂಡು ರೈತರ ಕಂಪನಿಯ ವಹಿವಾಟನ್ನು ಹೆಚ್ಚಿಸಲು ಶ್ರಮಿಸಿ ಮುಂದಿನ ದಿನಗಳಲ್ಲಿ ಸಿರಿಧಾನ್ಯದಿಂದ ಸೆಕೆಂಡರಿ ಉತ್ಪನ್ನಗಳನ್ನು ತಯಾರಿಸಲು ಸಲಹೆ ನೀಡಿದರು.  

ವಿರೇಶ ತಡಹಾಳ ಮಾತನಾಡಿ, ಸೋಲ್ಕೋ ಪ್ರತಿಷ್ಠಾನದಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗೋಸ್ಕರ ಸೌರಶಕ್ತಿ ಆಧಾರಿತ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು. 

ಈ ಸಮಾರಂಭದಲ್ಲಿ ತುಮರಿಕೊಪ್ಪ ಶಾಖೆಯ ಆಯ್‌ಓಬಿ ಬ್ಯಾಂಕ್ ಮ್ಯಾನೇಜರ ವಿನಾಯಕ ತೋಟಗೇರ, ಸೋಲ್ಕೋ ಪ್ರತಿಷ್ಠಾನದ ವಿರೇಶ ತಡಹಾಳ, ಸಹಜ ಸಮೃದ್ಧಿ ಸಂಸ್ಥೆ ಶಾಂತಕುಮಾರ, ಸ್ಕೋಪ್ ಸಂಸ್ಥೆ ಮುಖ್ಯಸ್ಥ ಬಂಡೇರಾವ ಪಟವಾರಿ, ಬೇಗೂರು ಗ್ರಾಮ ಪಂಚಾಯತಿ ಸದಸ್ಯರು, ರೈತರ ಕಂಪನಿ ನಿರ್ದೇಶಕರು, ಗ್ರಾಮದ ಹಿರಿಯರು, ಮಹಿಳಾ ಸಂಘದ ಸದಸ್ಯರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು. ಬಂಡೇರಾವ ಪಟವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲಪ್ಪ ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿ, ಚನ್ನಬಸಪ್ಪ ಶೀಗಟ್ಟಿ ವಂದಿಸಿದರು. 


ಸುದ್ದಿ ಓದಿ