ಕಾಗವಾಡ

ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ಉದ್ಘಾಟನೆ

ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ಉದ್ಘಾಟನೆ

ಶೇಡಬಾಳ 21: ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಸಾಲ ನೀಡುವಾಗ ಯಾವುದೇ ಜಾತಿ, ಮತ, ಪಂಥ, ಭಾಷೆಯೆಂಬ ಭೇದ-ಭಾವವೆಸಗದೇ ಎಲ್ಲರಿಗೂ ಸಾಲ ನೀಡಿ, ಅವರ ಆರ್ಥಿಕ ಪ್ರಗತಿಗೆ ಸಹಕರಿಸುವಂತೆ ಅಥಣಿಯ ಯುವ ನಾಯಕ ಚಿದಾನಂದ ಸವದಿ ಕರೆ ನೀಡಿದರು. 

ಅವರು ದಿ. 21 ರಂದು ಕಾಗವಾಡ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶೇತ್ಕರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

ಸಂಘವು ಸದಸ್ಯರಿಗೆ ಪ್ರಥಮ ಹಂತದಲ್ಲಿ 30 ಲಕ್ಷ ರೂಪಾಯಿ ಸಾಲ ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿ, ಸಂಘದ ಹಾಗೂ ತಮ್ಮ ಏಳಿಗೆಗೆ ಸಹಕರಿಸುವಂತೆ ರೈತ ಸದಸ್ಯರಿಗೆ ಹೇಳಿದರು. 

ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಇವರೆಲ್ಲರ ಸಹಕಾರದಿಂದ ನಮ್ಮ ತಂದೆ ಲಕ್ಷ್ಮಣ ಸವದಿಯವರು ಕಳೆದ 30 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಸುಮಾರು 144 ಸಹಕಾರಿ ಸಂಘಗಳನ್ನು ಆರೋಗ್ಯಕರವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಅವರದ್ದಾಗಿದೆ. ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾದ ಬೆಳಗಾವಿ ಸಾಲಮನ್ನಾ ಯೋಜನೆಯಲ್ಲಿ ಅತ್ಯಧಿಕ ರೈತರು ಲಾಭ ಪಡೆದುಕೊಂಡ ಜಿಲ್ಲೆಯಾಗಿದೆ. ಅದರಂತೆ ಜಿಲ್ಲೆಯಲ್ಲಿಯೇ ಅಥಣಿ ತಾಲೂಕವು ಅತ್ಯಧಿಕ ರೈತರು ಲಾಭ ಪಡೆದುಕೊಂಡ ತಾಲೂಕಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.  

ಈ ಸಂಘವು ಉತ್ತರೋತ್ತರವಾಗಿ ಹೆಮ್ಮರವಾಗಿ ಬೆಳೆದು, ರೈತರ ಬಾಳಿಗೆ ಬೆಳಕಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಹಲವು ರೈತರಿಗೆ ಪತ್ ಪತ್ರವನ್ನು ವಿತರಣೆ ಮಾಡಿದರು. 

ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಗವಾಡ ಪಿಎಸ್‌ಐ ಬಿ.ಎಂ. ರಬಕವಿ, ಸಂಘದ ಅಧ್ಯಕ್ಷ ಶಶಿಕಾಂತ ಜೋಷಿ, ಶಂಕರ ನಂದೇಶ್ವರ, ಹಣಮಂತ ಸಂಕ್ರಟ್ಟಿ, ಸುರೇಶ ಬಕಾರಿ ವೇದಿಕೆಯ ಮೇಲೆ ಆಶೀನರಾಗಿದ್ದರು. 

 ಈ ಸಮಯದಲ್ಲಿ ಸಂಘದ ಅಧ್ಯಕ್ಷ ಶಶಿಕಾಂತ ಜೋಷಿ, ಉಪಾಧ್ಯಕ್ಷ ಚನಗೌಡಾ ಪಾಟೀಲ, ಸಂಚಾಲಕರಾದ ಶಿವರಾಜ ಪಾಟೀಲ, ರಾಜಗೌಡಾ ಪಾಟೀಲ, ಶೀತಲ ಕರೋಲೆ, ಶಿವಾಜಿ ಜಾಧವ, ಸುಶೀಲ ಕೋರೆ, ಮಹಾದೇವ ಬಡಿಗೇರ, ಪದ್ಮಶ್ರೀ ಕವಟಗಿ, ಸಾರಿಕಾ ಒಡಯರ, ಕೃಷ್ಣಾ ವಡ್ಡರ, ಶಿವಾಜಿ ನಾಯಿಕ, ಮುಖ್ಯ ಕಾರ್ಯದರ್ಶಿ ಸಿದಗೌಡಾ ಪಾಟೀಲ, ಯುವ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ರಮೇಶ ಚೌಗುಲಾ ಸೇರಿದಂತೆ ಗ್ರಾಮದ ಅನೇಕ ಮುಖಂಡರು, ಸಂಘದ ರೈತ ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.  

ಶಶಿಕಾಂತ ಜೋಶಿ ಸ್ವಾಗತಿಸಿದರು. ಪ್ರೋ. ಬಿ.ಕೆ. ಪಾಟೀಲ ನಿರೂಪಿಸಿದರು. ರಾಜುಗೌಡಾ ಪಾಟೀಲ ವಂದಿಸಿದರು. 


ಸುದ್ದಿ ಓದಿ