ಸಂಸದರ ಅಭಿನಂದನಾ ಸಮಾರಂಭ ಉದ್ಘಾಟನೆ
ರಾಣಿಬೆನ್ನೂರ 20: ಪ್ರಜಾಪ್ರಭುತ್ವದಲ್ಲಿ ರಾಜಕೀಯ ನಾಯಕರ ಮೇಲೆ ವಿಶ್ವಾಸವಿಟ್ಟು ಅವರನ್ನು ಆಯ್ಕೆ ಮಾಡಿ ಅಧಿಕಾರದ ಚುಕ್ಕಾಣಿ ನೀಡುತ್ತಾರೆ. ರಾಜಕಾರಣಿಗಳು ಮತದಾನ ಮಾಡಿದ ಮತದಾರರನ್ನು ಅಭಿನಂದಿಸಬೇಕೆ ಹೊರತು, ಮತದಾರರು ರಾಜಕಾರಣಿಗಳನ್ನು ಅಭಿನಂದಿಸುವ ಮತ್ತು ಗೌರವಿಸುವುದು ಸರಿಯಲ್ಲ ಎಂದು ನೂತನ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಸಂಜೆ ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಸಂಸದರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗೆದ್ದವರು ಮತದಾರರ ಬಾಗಿಲಿಗೆ ಬಂದು ಕೃತಜ್ಞತೆ ಸಲ್ಲಿಸುವುದು ಬಹು ಮುಖ್ಯವಾಗುತ್ತದೆ. ತಾವು ಕೇವಲ 23 ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡಿದ್ದೇನೆ. ರಾಜಕೀಯ ಏಳು,ಬೀಳು ಕಂಡಿದ್ದೇನೆ. ಯಾವುದೇ ರಾಜಕೀಯ ವ್ಯಕ್ತಿಗೆ ಜನಸೇವೆ ಮಾಡುವ ಹಂಬಲವಿರಬೇಕು ಅದರಿಂದ ಮಾತ್ರ ಜನನಾಯಕನಾಗಲು ಸಾಧ್ಯವಾಗುವುದು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ತುಂಗಾ ಮೇಲ್ದಂಡೆ ಯೋಜನೆ, ಹಾಲು ಉತ್ಪಾದನಾ ಘಟಕ, ರೈತ ಉತ್ಪಾದನೆಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಮತದಾರರು ಬಹು ನೀರೀಕ್ಷೆಯಲ್ಲಿ ತಮ್ಮನ್ನು ಆರಿಸಿ ಕಳಿಸಿದ್ದಾರೆ. ಸುಮ್ಮನೆ ಹೋಗಿ ಕೈಕಟ್ಟಿ ಕುಳಿತುಕೊಳ್ಳುವ ಸಂಸದ ನಾನಲ್ಲ. ಮಾಡುವಕೆಲಸವನ್ನು ಪರಿಪೂರ್ಣಗೊಳಿಸಲು ಬದ್ಧನಾಗಿದ್ದೇನೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಹುರುಳಿಲ್ಲ. ಗ್ಯಾರೆಂಟಿ ಯೋಜನೆಗಳ ಮೇಲೆ, ಆಡಳಿತ ನಡೆಸಲು ಮುಂದಾದರೆ, ರಾಜ್ಯದ ಅಭಿವೃದ್ಧಿ ಮಾಡುವವರು ಯಾರು. ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ಸಿಗೆ ಭವಿಷ್ಯವಿಲ್ಲ, ಮುಂದೆ ಆಡಳಿತದಲ್ಲಿ ಅದು ಇರೋದು ಇಲ್ಲ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.
ಖಜಾನೆ ತುಂಬಿದೆ ಎಂದು ಹೇಳುವ ಮುಖ್ಯಮಂತ್ರಿಗಳು ಮಧ್ಯದ ದರ, ಚಾಪ ಕಾಗದ ಶುಲ್ಕ, ಇದೀಗ ಪೆಟ್ರೋಲ್ ಡೀಸೆಲ್ ದರ ಸೇರಿ ಮತ್ತಿತರ ಜನಸಾಮಾನ್ಯರ ನಿತ್ಯದ ಜೀವನ ಬದುಕಿನ ದರಗಳನ್ನು ಏರಿಸಿದ್ದು ಯಾಕೆ?. ಅದರ ಅರ್ಥ ಕಾಂಗ್ರೆಸ್ ದಿವಾಳಿಯಾಗಿದೆ ಖಜಾನೆ ಖಾಲಿಯಾಗಿದೆ ಎಂದು ಅಲ್ಲವೇ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಎರಡು ನೀರಾವರಿ ಯೋಜನೆಗಳು ಹೋಳೆಆನ್ವೇರಿ ಮತ್ತು ಮೇಡ್ಲೆರಿ ಭಾಗದಲ್ಲಿ ಆಗಬೇಕಾಗಿದೆ. ಅಲ್ಲದೆ ಉದ್ಯೋಗ ಸೃಷ್ಟಿಗೆ ಟೆಕ್ಸ್ ಟೈಲ್ಸ್ ಮತ್ತಿತರ ಫ್ಯಾಕ್ಟರಿಗಳು ನಿರ್ಮಿಸಬೇಕಾಗಿದೆ ಮತ್ತು ರೈಲ್ವೆ ಯೋಜನೆ ವಿಸ್ತೀರ್ಣಗೊಂಡು ರಸಗೊಬ್ಬರ ಮೆಕ್ಕೆಜೋಳ ಇಲ್ಲಿಂದಲೇ ಸರಬರಾಜು ಆಗಬೇಕಾಗಿದೆ ಅದಕ್ಕಾಗಿ ತಾವು ಸಿದ್ಧನಾಗಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಪಕ್ಷವು ಸೇರಿದಂತೆ ನಗರ ಮತ್ತು ತಾಲೂಕಿನ ಅನೇಕ ಸಂಘ ಸಂಸ್ಥೆಗಳು, ಮುಖಂಡರು ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ನೀಡಿ ಸಂಭ್ರಮಿಸಿದರು. ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾಽ ಬಸವರಾಜ ಕೇಲಗಾರ, ಕೆ.ಶಿವಲಿಂಗಪ್ಪ ಮಾತನಾಡಿದರು.
ತಾಲೂಕಾ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ನಗರಾಧ್ಯಕ್ಷ ರಮೇಶ ಗುತ್ತಲ, ಹಿರಿಯ ವಕೀಲರಾದ ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಜಂಬಗಿ, ಮಂಜುನಾಥ ಒಲೇಕಾರ, ಸಂತೋಷಕುಮಾರ ಪಾಟೀಲ, ದೀಪಕ ಹರಪನಹಳ್ಳಿ, ಚೋಳಪ್ಪ ಕಸವಾಳ, ಜಿ.ಜಿ. ಹೊಟ್ಟಿಗೌಡ್ರ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ, ಗವಿಸಿದ್ದಪ್ಪ, ಜೆಟ್ಟೆಪ್ಪ ಕರೇಗೌಡ್ರ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.