ಪಕ್ಷದ ಸಂಘಟನೆ ಬಲಪಡಿಸಲು ವಿಸ್ತಾರಕ ಯೋಜನೆ ಅನುಷ್ಠಾನಗೊಳಿಸಿ : ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಕರೆ: ಅಥಣಿ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆ
ಲೋಕದರ್ಶನ ವರದಿ
ಅಥಣಿ 25: ಪಕ್ಷದ ಸಂಘಟನೆ ಬಲಪಡಿಸಲು ವಿಸ್ತಾರಕ ಯೋಜನೆಯನ್ನು ವಿಧಾನ ಸಭಾ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿ ಎಂದು ಬಿಜೆಪಿ ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದರು. ಅವರು ಸ್ಥಳೀಯ ಸೋಶಿಯಲ್ ಕ್ಲಬ್ ನಲ್ಲಿ ಆಯೋಜಿಸಿದ್ದ ಅಥಣಿ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಂಘಟನಾತ್ಮಕವಾಗಿ ಪಕ್ಷ ಬಲಪಡಿಸಲು ಬಿಜೆಪಿ ರಾಜ್ಯ ಘಟಕ ಇಡೀ ರಾಜ್ಯದಲ್ಲಿ ವಿಸ್ತಾರಕ ಯೋಜನೆ ಪ್ರಾರಂಭಗೊಂಡಿದ್ದು, ಒಂದು ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತೊಂದು ವಿಧಾನ ಸಭಾ ಕ್ಷೇತ್ರಕ್ಕೆ ವಿಸ್ತಾರಕರಾಗಿ ಪ್ರವಾಸ ಕೈಗೊಂಡು ಪ್ರತಿ ಬೂತ್ ಅಧ್ಯಕ್ಷ, ಪೇಜ ಸಮೀತಿ ಪ್ರಮುಖರೊಂದಿಗೆ ಚರ್ಚಿಸಬೇಕು ಮತ್ತು ಮತಗಟ್ಟೆ ಪ್ರಭಾರಿ, ಮಹಿಳಾ ಸದಸ್ಯೆ, ಯುವ ಸದಸ್ಯೆ, ಪರಿಶಿಷ್ಠ ಜಾತಿ ಸದಸ್ಯ, ಹಿಂದುಳಿದ ವರ್ಗದ ಸದಸ್ಯ ಹಾಗೂ ಬೂತ್ ಪದಾಧಿಕಾರಿಗಳ ನೇಮಕ ಮಾಡಿದ್ದರೆ ಅವರನ್ನು ಭೇಟಿ ಮಾಡಿ ಅವರು ಮಾಡಬೇಕಾದ ಕೆಲಸದ ಬಗೆಗೆ ಚರ್ಚಿಸಬೇಕು ಎಂದ ಅವರು ವಿಸ್ತಾರಕರು ತಮ್ಮ ಪ್ರವಾಸದಲ್ಲಿ ಮಠಾಧೀಶರು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಫಲಾನುಭವಿಗಳು, ಹಿತೈಶಿಗಳು, ಸಮುದಾಯ ಪ್ರಮುಖರನ್ನು, ಸಹಕಾರಿ ಕ್ಷೇತ್ರದ ಗಣ್ಯರನ್ನು, ಗಜಾನನ ಉತ್ಸವ ಸಮೀತಿ ಪದಾಧಿಕಾರಿಗಳನ್ನು ಸಂಪರ್ಕಿಸಿ ಚರ್ಚಿಸಬೇಕು ಎಂದು ಹೇಳಿದರು.
ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಚುನಾವಣೆ ವರ್ಷ ಇರುವುದರಿಂದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ವಿಸ್ತಾರಕ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಎಂದ ಕರೆ ನೀಡಿದ ಅವರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹೆಚ್ಚಿನ ಸಮಯವನ್ನು ಚಿಕ್ಕೋಡಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲ ಪಡಿಸಬೇಕು ಎಂದು ಕರೆ ನೀಡಿದರು.
ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಅಥಣಿ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳು ವಿಸ್ತಾರಕ ಯೋಜನೆಯಲ್ಲಿ ಕಾಗವಾಡ ವಿಧಾನ ಸಭಾ ಕ್ಷೇತ್ರಕ್ಕೆ ಹಾಗೂ ಕಾಗವಾಡ ವಿಧಾನ ಸಭಾ ಕ್ಷೇತ್ರದ ಪದಾಧಿಕಾರಿಗಳು ಅಥಣಿ ವಿಧಾನ ಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದ ಅವರು ಬೂತ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಿದ್ದರಿಂದಲೇ ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿಯೂ ಅಭೂತಪೂರ್ವ ಗೆಲುವು ಸಾಧಿಸಲು ಕಾರಣವಾಯಿತು ಎಂದು ಹೇಳಿದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಚಿದಾನಂದ ಸವದಿ, ಎಸ್.ಎ.ಮುದಕಣ್ಣವರ, ಉಮೇಶರಾವ ಬಂಟೋಡಕರ, ಶ್ರೀಶೈಲ ನಾಯಿಕ, ಜಿಲ್ಲಾ ಉಪಾಧ್ಯಕ್ಷ ಆನಂದ ದೇಶಪಾಂಡೆ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧರೆಪ್ಪ ಠಕ್ಕಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಖೇತಗೌಡರ, ಸತೀಶ ಅಪ್ಪಾಜಿಗೋಳ, ನಿಂಗಪ್ಪ ಖೋಕಲೆ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಪ್ರಸಾದ ಪಚಂಡಿ, ಮಂಡಲ ಅಧ್ಯಕ್ಷ ಅಣ್ಣಾಸಾಹೇಬ ನಾಯಿಕ ಸೇರಿದಂತೆ ಮಂಡಲ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.