ಇಂಡಿ

ಅಜ್ಞಾನಗಳೇ ಮೂಢನಂಬಿಕೆಗಳಿಗೆ ಮೂಲ ಕಾರಣ: ಕೋಣೆನ್ನವರ

ಅಜ್ಞಾನಗಳೇ ಮೂಢನಂಬಿಕೆಗಳಿಗೆ ಮೂಲ ಕಾರಣ: ಕೋಣೆನ್ನವರ

ಇಂಡಿ: ಭಾರತ ದೇಶದಲ್ಲಿ ಮೂಢನಂಬಿಕೆಗಳು ಸಾಕಷ್ಟಿವೆ. ಭಯ ಮತ್ತು ಅಜ್ಞಾನಗಳೇ ಮೂಢನಂಬಿಕೆಗಳಿಗೆ ಮೂಲ ಕಾರಣ. ಇವು ಆತ್ಮ ವಿಶ್ವಾಸವನ್ನು ನಾಶ ಮಾಡುವುದಲ್ಲದೇ ಸ್ವತಂತ್ರ ಆಲೋಚನೆಗಳಿಗೆ ಧಕ್ಕೆ ತರುತ್ತವೆ ಎಂದು ವಿಜಯಪುರ ದರ್ಬಾರ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಕಾಶೀನಾಥ ಕೋಣೆನ್ನವರ ಹೇಳಿದರು. 

ಗುರುವಾರ ಪಟ್ಟಣದ ಎಸ್‌.ಎಸ್‌.ವಿ.ವಿ ಸಂಘದ ಜಿ.ಆರ್‌. ಗಾಂಧಿ ಕಲಾ, ವಾಯ್‌.ಎ. ಪಾಟೀಲ ವಾಣಿಜ್ಯ, ಎಮ್‌.ಎಫ್‌. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ  ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು.  

ದೇಶದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದೇ ಮೇಲು. ಹಾಗೆ ಒಂದು ವೇಳೆ ದುಡಿದರೆ ದೇಶದ ಪ್ರಗತಿಯಾಗಲು ಸಾಧ್ಯವೆಂಬುದನ್ನು ಕುವೆಂಪು ಅವರು ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದು, ಅವರ ಕೃತಿಗಳಲ್ಲಿ ಸಾಮಾಜಿಕ ವಾಸ್ತವತೆ, ಪರಿಸರ ಪ್ರೇಮ, ಗ್ರಾಮೀಣ ಬದುಕು, ಜಾತಿ, ಮತ, ಪಂಥ, ಕುಲ, ಧರ್ಮ ಮುಂತಾದ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಎಂದು ಹೇಳಿದರು.  

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್‌.ಬಿ. ಜಾಧವ ವಹಿಸಿದ್ದರು. ಕುವೆಂಪುರವರ ಕನ್ನಡ ನಾಡು ನುಡಿಗೆ ಅವರ ಕೊಡುಗೆ ಅಪಾರವಾಗಿದ್ದು. 80 ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಅದರಲಿ ಮುಖ್ಯವಾಗಿ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ, ಪ್ರೇಮ ಕಾಶ್ಮೀರ, ಅನಿಕೇತನ ಅನೇಕ ಗ್ರಾಮೀಣ ಜನತೆಯ ಬದುಕು, ಸೊಗಡಿನ ನೈಜ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಭಾರತೀಯ ಭಾಷೆಗಳಲ್ಲಿ ಕನ್ನಡ ಭಾಷೆಗೆ ತಂದೆ-ಮಗ ಜೋಡಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕುವೆಂಪು-ಪೂರ್ಣಚಂದ್ರ ತೇಜಸ್ವಿ ಹಾಗೂ ಡಿ.ವಿ ಗುಂಡಪ್ಪ-ಬಿ.ಜಿ.ಎಲ್ ಸ್ವಾಮಿರವರು ಕನ್ನಡ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕನ್ನಡ ಸಂಶೋಧನೆಯನ್ನು ಕೈಗೊಳ್ಳಬೇಕಾದರೆ ಕುವೆಂಪು, ಶಿವರಾಮ ಕಾರಂತ ಹಾಗೂ ಪೂರ್ಣಚಂದ್ರ ತೇಜಸ್ವಿಯವರನ್ನು ಓದಿದರೆ ಮಾತ್ರ ಸಂಶೋಧನಾ ಪ್ರವೇಶ ಪಡೆದಂತೆ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ ಎಂದರು.  

ಕಾರ‌್ಯಕ್ರಮದ ವೇದಿಕೆಯಲ್ಲಿ ಡಾ. ಜಯಪ್ರಸಾದ ಡಿ ಇದ್ದರು. 

ಕಾರ‌್ಯಕ್ರಮದಲ್ಲಿ ಡಾ. ಆನಂದ ನಡವಿನಮನಿ, ಡಾ. ವಿಶ್ವಾಸ ಕೋರವಾರ, ಡಾ. ಪ್ರಕಾಶ ರಾಠೋಡ, ಡಾ. ಸುರೇಂದ್ರ, ಡಾ. ಸಿ.ಎಸ್‌. ಬಿರಾದಾರ, ಮಲ್ಲಿಕಾರ್ಜುನ ಕೋಣದೆ, ರಾಘವೇಂದ್ರ ಇಂಗನಾಳ, ಭಾಗ್ಯಶ್ರೀ ಮೋರೆ, ಶೃತಿ ಪಾಟೀಲ, ಶ್ವೇತಾ ಕಾಂತ, ಎಸ್‌.ಎಸ್‌. ಹೂಗಾರ, ಬಲರಾಮ ವಡ್ಡರ, ಭಾರತಿ ಕನ್ನೊಳ್ಳಿ ಸೇರಿದಂತೆ  ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ