ಸಾಹಿತ್ಯ ಚಟುವಟಿಕೆಗಳು ಗ್ರಾಮಮಟ್ಟಕ್ಕೆ ವಿಸ್ತರಿಸುವೆ : ಶೆಲ್ಲಿಕೇರಿ
ಗುಳೇದಗುಡ್ಡ.15: ಕನ್ನಡಿಗರನ್ನು ಪ್ರತಿನಿಧಿಸುವ ರಾಜ್ಯದ ಏಕೈಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗರನ್ನು ತಲುಪಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು, ಈ ನಿಟ್ಟಿನಲ್ಲಿ ನಾನು ಬಾಗಲಕೋಟ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದರೆ, ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ನಗರ, ಗ್ರಾಮಮಟ್ಟದಲ್ಲಿ ನಿರಂತರವಾಗಿ ನಡೆಸುತ್ತೇನೆ. ಪ್ರತಿಯೊಂದು ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತೇನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಿವಾನಂದ ಶೆಲ್ಲಿಕೇರಿ ಹೇಳಿದರು.
ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಲಕ್ಷಿತರಾಗಿ ಎಲೆಮರೆ ಕಾಯಿಯಂತಿರುವ ಸಾಹಿತಿಗಳನ್ನು, ಕಲಾವಿದರನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಜಿಲ್ಲಾ ಸಾಹಿತ್ಯ ಕೋಶ ಸಂಪಾದನೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಸಂಘಟಿಸುವುದು, ಯುವ ಸಾಹಿತಿಗಳಿಗೆ, ಕಲಾವಿದರಿಗೆ ವೇದಿಕೆ ನಿರ್ಮಾಣ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಗ್ರಾಮೀಣ ಭಾಗಕ್ಕೂ ಕೊಂಡೊಯ್ಯುವ ಮೂಲಕ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳುತ್ತೇನೆ. ಜಿಲ್ಲೆಯ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಕನ್ನಡ ಸೇವೆ ಮಾಡಲು ಸದಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸಿದ್ರಾಮ ಶಿರೋಳ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳವಣಿಗೆಯಾಗಬೇಕು. ನಾವು ನೀಡುವ ಮತ ಆ ಬೆಳವಣಿಗೆಗೆ ಪೂರಕವಾಗಿರಬೇಕು. ಈ ಹಿನ್ನಲೆಯಲ್ಲಿ ಕ್ರೀಯಾಶೀಲ ವ್ಯಕ್ತಿತ್ವದ ಶಿವಾನಂದ ಶೆಲ್ಲಿಕೇರಿ ಅವರು ಆಯ್ಕೆಯಾದಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಚಂದ್ರಕಾಂತ ದೇಸಾಯಿ, ಡಾ.ಸಂಗಮೇಶ ಕಲ್ಯಾಣಿ, ಡಾ.ಭೀಮನಗೌಡ ಪಾಟೀಲ, ಸಿ.ಎಂ. ಜೋಶಿ, ಯಲ್ಲಪ್ಪ ಮನ್ನಿಕಟ್ಟಿ, ಸಿದ್ದು ರಾವಳ, ಚಂದ್ರಶೇಖರ ಕಾಳನ್ನವರ, ಬಸವರಾಜ ಯಂಡಿಗೇರಿ, ಗಂಗಾಧರ ಸೇರಿದಂತೆ ಕಸಾಪ ಮತದಾರರು ಇದ್ದರು.