ಸರಕಾರ-ಸಾರ್ವಜನಿಕರ ಮಧ್ಯೆ ನಾನು ನಾವಿಕ: ಶ್ರೀಮಂತ ಪಾಟೀಲ
ಕಾಗವಾಡ 30: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾಗವಾಡ ಮತಕ್ಷೇತ್ರದ ಅರಳಿಹಟ್ಟಿ, ಮದಭಾವಿ, ಕೌಲಗುಡ್ಡದವರೆಗೆ 16.7 ಕಿಮೀ ರಸ್ತೆಗೆ 23 ಕೋಟಿ ರೂ. ಅನುದಾನದಡಿ ಮಾಜಿ ಸಚಿವ ಹಾಗೂ ಶಾಸಕ ಶ್ರೀಮಂತ ಪಾಟೀಲ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಶುಕ್ರವಾರ ದಿ. 29ರಂದು ಅರಳಿಹಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸರಕಾರ ಹಾಗೂ ಸಾರ್ವಜನಿಕರ ಮಧ್ಯೆ ನಾನು ಒಬ್ಬ ನಾವಿಕನಿದ್ದ ಹಾಗೆ ಸರಕಾರದಿಂದ ಬಂದ ಅನುದಾನವನ್ನು ತಂದು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವುದೇ ನನ್ನ ಆದ್ಯ ಕರ್ತವ್ಯ, ಕಳೆದ ಹಲವಾರು ವರ್ಷಗಳಿಂದ ಗಡಿ ಭಾಗದ ರಸ್ತೆಗಳು ಗ್ರಾಮೀಣ ರಸ್ತೆಗಳಾಗಿದ್ದವು. ಮೊನ್ನೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಾಗ ಮಹಾರಾಷ್ಟ್ರದ ಗಡಿ ಭಾಗದಿಂದ ಕೌಲಗುಡ್ಡವರೆಗೆ 23 ಕೋಟಿ ರೂ. ಅನುದಾನ ಮಂಜೂರು ಮಾಡಿ ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಎರಡೆ ಹಂತವಾಗಿ ಕೌಲಗುಡ್ಡದಿಂದ ಮೋಳೆ, ಐನಾಪುರ, ಕೃಷ್ಣಾ ಕಿತೂರವರೆಗೆ ರಾಜ್ಯ ಹೆದ್ದಾರಿ ನಿರ್ಮಿಸಲಾಗುವುದೆಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಕ್ಷೇತ್ರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ 4 ವರ್ಷಗಳಿಂದ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದು ಬರುವ ಕೆಲವೇ ದಿನಗಳಲ್ಲಿ ಬಸವೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಈ ಭಾಗಕ್ಕೆ ನೀರು ಹರಿಸುವುದಾಗಿ ಶಾಸಕ ಶ್ರೀಮಂತ ಪಾಟೀಲ ಭರವಸೆ ನೀಡಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜೆ.ಎ.ಹಿರೇಮಠ, ಸಹಾಯಕ ಅಭಿಯಂತರ ಎಂ.ಎಸ್.ಮಗದುಮ್, ಗುತ್ತಿಗೆದಾರ ನಾನಾಸಾಹೇಬ ಅವತಾಡೆ, ಮುಖಂಡರಾದ ವಿನಾಯಕ ಬಾಗಡಿ, ಆರ್.ಎಂ.ಪಾಟೀಲ, ಮುರಗೆಪ್ಪ ಮಗದುಮ್, ಪ್ರಕಾಶ ಖುಟ್ಟೆ, ಬಾಳು ಹಜಾರೆ, ಸಿದ್ದು ಖೋತ, ರಾಮ ಸಡ್ಡಿ, ತಹಸೀಲ್ದಾರ ದುಂಡಪ್ಪ ಕೋಮಾರ, ತಾಲೂಕಾ ಪಂಚಾಯತ್ ಇಓ ಶೇಖರ ಕರಬಸಪ್ಪಗೋಳ ಇದ್ದರು.