ನನ್ನ ಗೆಲುವನ್ನು ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ: ಭೂಸನೂರ
ಸಿಂದಗಿ04: ಉಪಚುನಾವಣೆಯಲ್ಲಿನ ನನ್ನ ಗೆಲುವು ಪಕ್ಷದ ಕಾರ್ಯಕರ್ತರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಅರ್ಿಸುತ್ತೇನೆ ಎಂದು ನೂತನ ಶಾಸಕ ರಮೇಶ ಭೂಸನೂರ ಹೇಳಿದರು.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಲು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿ, ಹಾಲಿ, ಮಾಜಿ ಸಚಿವರು, ಶಾಸಕರು, ನಿಗಮ, ಮಂಡಳಿಯ ಅಧ್ಯಕ್ಷರು, ಮುಖಂಡರು, ಧುರಿಣರು ಸೇರಿದಂತೆ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಕ್ಷೇತ್ರದ ಮತದಾರರ ಮನಸ್ಸು ಮುಟ್ಟಲು ಯಶಸ್ವಿಯಾಗಿದ್ದು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಯಿತು.
ಚುನಾವಣೆಯಲ್ಲಿ ಬಿಜೆಪಿ - ಕಾಂಗ್ರೆಸ್ ನೇರ ಸ್ಪರ್ಧೆ ಏರ್ಪಟಟಿದ್ದು 25850 ಮತಗಳ ಅಂತರಗಳಿಂದ ಗೆಲ್ಲಬಹುದು ಎಂದು ಆಂತರಿಕವಾಗಿ ಸಮಿಕ್ಷೆ ಮಾಡಲಾಗಿತ್ತು. ಪಕ್ಷದ ಹೈಕಮಾಂಡಿಗೆ ವರದಿ ಸಲ್ಲಿಸಲಾಗಿತ್ತು. ಕ್ಷೇತ್ರದ ಅಭಿವೃದ್ಧಿ ಬಯಸಿ ಎಲ್ಲ ಸಮುದಾಯದ ಜನ ನನಗೆ ಸಹಾಯಮಾಡಿದ್ದಾರೆ. ಎಲ್ಲ ಸಮುದಾಯಗಳ ಸಮಾವೇಶ ಮಾಡಿ ಸಮುದಾಯ ಜಾಗೃತಿ ಮಾಡಿ ಅವರ ಮನಗೆಲ್ಲುವ ಕಾರ್ಯಮಾಡಿದೆ. 31 ಸಾವಿರ ಅಂತರದಿಂದ ಗೆಲುವು ಸಾಧಿಸುತ್ತೇವೆ ಎಂದು ರಾಜ್ಯದಲ್ಲಿ ಬಿಜೆಪಿ ನಾಯಕರು ಸೇರಿದಂತೆ ನಾನೇ ನಂಬಿರಲಿಲ್ಲ. ಸಿಂದಗಿ ಮತ್ತು ಆಲಮೇಲ ಪಟ್ಟಣ ಹೆಚ್ಚು ಬಲ ನೀಡಿದೆ ಎಂದು ಹೇಳಿದರು.
ಮುಂದಿನ 18 ತಿಂಗಳ ಅವಧಿಯ ಅಧಿಕಾರವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕ್ಷೇತ್ರ ಅಭಿವೃದ್ಧಿ ಪಡೆಸುತ್ತೇನೆ. ಆಲಮೇಲ ತಾಲೂಕಾ ಕೇಂದ್ರವಾಗಿದ್ದು ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಸರಕಾರಿ ಕಚೇರಿಗಳನ್ನು ಪ್ರಾರಂಭಿಸುವುದು, ತೋಟಗಾರಿಗೆ ಕಾಲೇಜು ಪ್ರಾರಂಭಿಸುವುದು, ಕಡಣಿ ಬ್ಯಾರೇಜ್ ಕೆಲಸಕ್ಕೆ ಚಾಲನೆ ನೀಡುವ ಕೆಲಸ ಮಾಡಲಾಗುವುದು. ಸಿಂದಗಿ ಪಟ್ಟಣದಲ್ಲಿ ಎಆರ್ಟಿಓ ಕಚೇರಿ ಪ್ರಾರಂಭಿಸಲು ಲಕ್ಷಣ ಸವದಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸಹಿ ಮಾಡಿದ್ದಾರೆ. ಅವರ ಸಹಾಯದಿಂದ ಸಿಂದಗಿ ಪಟ್ಟಣದಲ್ಲಿ ಎಆರ್ಟಿಓ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗುರ, ಬಿ.ಎಚ್. ಬಿರಾದಾರ, ಸಿದ್ದು ಬುಳ್ಳಾ, ಶ್ರೀಶೈಲಗೌಡ ಬಿರಾದಾರ, ನಿಂಗು ಬಗಲಿ, ಚಂದ್ರಶೇಖರ ಅಮಲಿಹಾಳ, ಚಂದ್ರಶೇಖರ ಕುಂಬಾರ, ರವಿಕುಮಾರ ನಾಯ್ಕೋಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.