ಪ್ರಾಣದ ಹಂಗ ತೊರೆದು ಮುಸ್ಲಿಂ ಸಮಾಜದ ಸದಸ್ಯರು ರಾಜ್ಯಕ್ಕೆ ಮಾದರಿ
ಮೃತಪಟ್ಟ ಎಲ್ಲ ಜಾತಿ ಜನಾಂಗದವರ ಶವ ಸಂಸ್ಕಾರ
ಬೈಲಹೊಂಗಲ 17: ಇಡೀ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಎರಡನೇ ಅಲೆಯು ತೀವ್ರ ಗತಿಯಲ್ಲಿ ಹರಡುತ್ತಿದ್ದು, ಕೊರೊನಾ ಸೋಂಕಿನಿಂದ ಮೃತಪಟ್ಟ ಎಲ್ಲ ಜಾತಿ ಜನಾಂಗದವರ ಶವ ಸಂಸ್ಕಾರವನ್ನು ಬೈಲಹೊಂಗಲ ಮುಸ್ಲಿಂ ಸಮಾಜ ತಂಡ ಅಚ್ಚುಕಟ್ಟಾಗಿ ನೆರವೇರಿಸುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಕಳೆದ ವರ್ಷ ಕೊರೊನಾ ಸಂಕಷ್ಟದಲ್ಲಿ ಆರಂಭಿಸಿದ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಮುಸ್ಲಿಂ ಯುವಕರ ತಂಡ ಪ್ರಾಣದ ಹಂಗು ತೊರೆದು ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಧಾವಿಸುತ್ತಿದ್ದಾರೆ. ಇಲ್ಲಿಯವರೆಗೂ 200 ಕ್ಕೂ ಹೆಚ್ಚು ಕೊರೊನಾದಿಂದ ಮೃತ ಪಟ್ಟವರನ್ನು ಶವ ಸಂಸ್ಕಾರ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಎಆಯ್ಎಂಡಿಎಫ್ ಸಂಘಟನೆ ಸಂಸ್ಥಾಪಕ ಸದಸ್ಯ ನಜೀರ ಮುಲ್ಲಾ ನೇತೃತ್ವದಲ್ಲಿ ಫಾರೂಕ ಪಟ್ಟಿಹಾಳ, ರಫೀಕ ಕರೋಲಿ, ರಸೂಲ್ ಗೊರೆಖಾನ್, ಸಾದೀಕ ಕೊರವಿನಕೊಪ್ಪ, ಸೋಯಲ್ ಕೊರವಿನಕೊಪ್ಪ, ಬುಡ್ಡೆಸಾಬ ಮದಲಮಟ್ಟಿ, ರಫೀಕ ನಾಯಕ, ಮುಜಾಮಿಲ್ ಮುಜಾವರ, ಸುಲೇಮಾನ ನೇಸರಗಿ ಸೇರಿದಂತೆ ಸದಸ್ಯರ ತಂಡ ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಕಿತ್ತೂರ, ಸವದತ್ತಿ, ಸಂಕೇಶ್ವರ ಸೇರಿದಂತೆ ನಾನಾ ಕಡೆ ಇವರೇ ಶವ ಸಂಸ್ಕಾರ ಮಾಡುತ್ತಿದ್ದಾರೆ.
ಕೊರೊನಾದಿಂದ ಮೃತಪಟ್ಟರೆ ಕುಟುಂಬಸ್ಥರು, ಬಂಧುಮಿತ್ರರು ಶವ ಮುಟ್ಟಲು ಮುಂದೆ ಬರುತ್ತಿಲ್ಲ. ಇದು ಅತ್ಯಂತ್ಯ ಅಮಾನವೀಯ. ಇವರಿಂದ ಸ್ನೇಹಿತರ ತಂಡ ಶವ ಸಂಸ್ಕಾರಗೊಳ್ಳಲು ದೃಢ ನಿರ್ಧಾರ ಕೈಗೊಂಡೆವು. ವ್ಯಕ್ತಿಯ ಜಾತಿ ಲೆಕ್ಕಿಸದೆ ಶವ ಸಂಸ್ಕಾರ ಮಾಡುತ್ತಿದ್ದೇವೆಂದು ಕೊರೊನಾ ವಾರಿಯರ್ಸ್ಗಳು ಪತ್ರಿಕೆಗೆ ತಿಳಿಸಿದರು.
ಸರಕಾರದ ಯಾವ ಸೌಲಭ್ಯವಿಲ್ಲ :
ಸರಕಾರದಿಂದ ಯಾವುದೇ ಸೌಲಭ್ಯ ಇಲ್ಲದೇ ಈ ತಂಡ ಹಗಲು, ರಾತ್ರಿ ಎನ್ನದೇ ಶವಸಂಸ್ಕಾರ ನೆರವೇರಿಸುತ್ತಿದೆ. ಕಡು ಬಡವರ ಶವಸಂಸ್ಕಾರವನ್ನು ಉಚಿತವಾಗಿ ನೆರವೇರಿಸಿದರೆ ಆರ್ಥಿಕ ಶಕ್ತಿ ಇದ್ದು ಕೊರೊನಾ ಭಯದಿಂದ ಅಂತಿಮ ಸಂಸ್ಕಾರಕ್ಕೆ ಮುಂದೆ ಬಾರದರಿಂದ ಪಿಪಿಇ ಕಿಟ್, ಕಟ್ಟಿಗೆ ಮೊದಲಾದ ವೆಚ್ಚವಾಗಿ 500 ರೂ.ಪಡೆಯಲಾಗುತ್ತದೆ. ಸುಮಾರು 8 ಅಡಿ ತೆಗ್ಗು ತೆಗೆದು ಶವ ಹೊಳಲಾಗುತ್ತದೆ. ನಂತರ ಪಿಪಿಇ ಕಿಟ್ಗಳನ್ನು ದಹಿಸಲಾಗುತ್ತದೆ. ಆರೋಗ್ಯ ಇಲಾಖೆಯಿಂದ ಪಿಪಿಇ ಕೀಟ್, ಮಾಸ್ಕ್, ಹ್ಯಾಂಡಗ್ಲೊಸ್ ಸ್ಯಾನಿಟೈಸರ್ ಯಾವುದೂ ಕೂಡಾ ಇಲ್ಲಿಯವರೆಗೂ ನೀಡಿಲ್ಲ. ಸ್ವತಃ ದುಡ್ಡು ಖರ್ಚು ಮಾಡಿ ಬೆಂಗಳೂರಿನಿಂದ ಪಿಪಿಇ ಕೀಟ್ ತರಿಸಲಾಗುತ್ತಿದೆ. ಸರಿಯಾಗಿ ಅಂಬ್ಯುಲೆನ್ಸ್ ಸೇವೆ ಕೂಡಾ ದೊರೆಯುತ್ತಿಲ್ಲ. ಸ್ವಂತ ವಾಹನ ಬಳಸಿಕೊಳ್ಳಲಾಗುತ್ತಿದೆ. ಎಲ್ಲವೂ ಮುಸ್ಲಿಂ ಸಮಾಜದ ತಂಡ ಸಿದ್ಧಪಡಿಸಿಕೊಂಡು ಶವ ಸಂಸ್ಕಾರ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆರೋಗ್ಯ ಇಲಾಖೆ ಪಿಪಿಇ ಕೀಟ್, ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡಗ್ಲೋಸ್ ವಿತರಿಸಲು ಕ್ರಮ ಕೈಗೊಳ್ಳಬೇಕು.
ಬಡವರಿಗೆ ಆಹಾರದ ಕೀಟ್ ವಿತರಣೆ ಸರಕಾರ ಕೊರೊನಾ ವೈರಸ್ ತಡೆಗಟ್ಟಲು ಲಾಕ್ಡೌನ್ ಘೋಷಣೆ ಮಾಡಿದ್ದು, ಇದರಿಂದ ಬಡವರಿಗೆ, ನಿರ್ಗತಿಕರಿಗೆ, ಅನಾಥರಿಗೆ ತೊಂದರೆಯಾಗದಂತೆ ಮುಸ್ಲಿಂ ಸಮಾಜದಿಂದ ಆಹಾರ ಕೀಟ್ ವಿತರಿಸಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಅವರು ಪ್ರತಿದಿನ ಅನಾಥರಿಗೆ, ನಿರ್ಗತಿಕರಿಗೆ ಆಹಾರ ವಿತರಿಸುತ್ತಿದ್ದಾರೆ. ಇದರ ಜೊತೆಗೆ ವೈದ್ಯಕೀಯ ನೆರವು ಕೂಡಾ ಮಾಡಲಾಗುತ್ತಿದೆ. ಆಕ್ಸಿಜನ್ ಸಿಲೆಂಡರ್ ಕೂಡಾ ಮುಟ್ಟಿಸಲಾಗುತ್ತಿದೆ.
ಬೆಳಗಾವಿ, ಬೈಲಹೊಂಗಲ, ರಾಮದುರ್ಗ, ಸವದತ್ತಿ, ಕಿತ್ತೂರ ಭಾಗದಲ್ಲಿಯೂ ಕೂಡಾ ಸೋಂಕಿನಿಂದ ಮೃತಪಟ್ಟರೆ ತಕ್ಷಣ ಅಲ್ಲಿಗೆ ಭೇಟಿ ನೀಡಿ ಕೊನೆಯವರೆಗೂ ಇದ್ದು, ಅಂತ್ಯ ಸಂಸ್ಕಾರ ಕ್ರಿಯೆ ನಡೆಸಲಾಗುತ್ತಿದೆ. ಕೆಲವು ಕಡೆ ಸ್ವತಃ ಮನೆಯವರು ಮುಂದಾಗದ ಕಾರಣ ಮುಂದೆನಿಂತು_ಅವರ ಸಂಪ್ರದಾಯಂತೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಕಷ್ಟಗಳನ್ನು ಸಹಿಸಿಕೊಂಡು ಸಮಾಜ ಸೇವೆ ಮಾಡುತ್ತಿದ್ದೇವೆ. ಅಧಿಕಾರಿಗಳು ಸಹಕಾರ ನೀಡಬೇಕು.
ರಫೀಕ ಬಡೇಘರ, ಸಾಮಾಜಿಕ ಕಾರ್ಯಕರ್ತರು, ಬೈಲಹೊಂಗಲ
ಪವಿತ್ರ ರಂಜಾನ ಹಬ್ಬದಂದೂ ಕೊರೊನಾದಿಂದ ಮೃತಪಟ್ಟ ನಾಲ್ಕು ಜನರ ಶವ ಸಂಸ್ಕಾರ ಅಚ್ಚುಕಟ್ಟಾಗಿ ಮಾಡಲಾಯಿತು. ಬಿಸಿಲು, ಮಳೆ ಲೆಕ್ಕಿಸದೆ ಮಾನವೀಯತೆ ದೃಷ್ಟಿಯಿಂದ ಶವ ಸಂಸ್ಕಾರ ಮಾಡಲಾಗುತ್ತಿದೆ. ಕೈಲಾದಷ್ಟು ಸಹಾಯ-ಸಹಕಾರ ಮಾಡಲಾಗುತ್ತಿದೆ.
ನಜೀರ ಮುಲ್ಲಾ
ಎಆಯ್ಎಂಡಿಎಫ್ ಸಂಘಟನೆ ಸಂಸ್ಥಾಪಕ ಸದಸ್ಯ
ಬೈಲಹೊಂಗಲ ನಾಡು ಕೋಮು ಸೌಹಾರ್ದತೆಗೆ ಮಾದರಿ ಎಂಬುದು ಮತ್ತೊಮ್ಮೆ ಸಾಬಿತಾಗಿದೆ. ಸೋಂಕಿತರನ್ನು ಕಂಡರೆ ಓಡುವ ಜನರು ಮುಸ್ಲಿಂ ಸಮಾಜದ ತಂಡ ಪ್ರಾಣದ ಹಂಗು ತೊರೆದು ಕೊರೊನಾದಿಂದ ಮೃತಟ್ಟವರ ಶವ ಸಂಸ್ಕಾರದಲ್ಲಿ ತೊಡಗಿರುವುದು ಶ್ಲಾಘನೀಯ. ಈ ಕೊರೊನಾ ವಾರಿಯರ್ಸ್ಗಳ ಸೇವೆ ಎಂದೂ ಮರೆಯಲಾರದಂತಾಗಿದೆ.
ಮಹಾಂತೇಶ ಮತ್ತಿಕೊಪ್ಪ
ಯುವ ಮುಖಂಡರು, ಬೈಲಹೊಂಗಲ