ಗ್ರಾಹಕನಿಗೆ ಡೆಮೋ ಪೀಸ್ ಕೊಟ್ಟ ಹುಬ್ಬಳ್ಳಿಯ ಜೆ.ಟಿ.ಕೆ. ಅರಿಹಂತ ಅಪ್ಲಾಯನ್ಸ್ಸ್ರವರಿಗೆ ದಂಡ ಮತ್ತು ಆದೇಶ
ಧಾರವಾಡ ಆಗಸ್ಟ್.07: ಗದಗ ತಾಲೂಕಿನ ಚಿಂಚಳ್ಳಿ ಗ್ರಾಮದ ಅರುಣ ಭಟ್ಟೂರ ಎಂಬುವರು ಎದುರುದಾರರಾದ ಹುಬ್ಬಳ್ಳಿಯ ಜೆ.ಟಿ.ಕೆ. ಅರಿಹಂತ ಅಂಗಡಿಯಲ್ಲಿ ದಿ. 6-11-2023ರಂದು ರೂ.31,650 ಹಣ ಕೊಟ್ಟು ಎಲ್.ಜಿ.ಕಂಪನಿಯ ಪ್ರಿಡ್ಜ್ನ್ನು ಖರೀದಿಸಿದ್ದರು. ಆದರೆ ಎದುರುದಾರರು ಹೊಸ ವಿನ್ಯಾಸದ ಪ್ರಿಡ್ಜ್ ಕೊಡದೇ ಹಳೆಯ ಡೆಮೊ ಪೀಸ್ ಗೀಚಾದ ಪ್ರಿಡ್ಜ್ನ್ನು ದೂರುದಾರರ ಮನೆಗೆ ವಿತರಣೆ ಮಾಡಿದ್ದರು. ಪ್ಯಾಕ ಬಿಚ್ಚಿ ನೋಡಿದಾಗ ಅದರ ಮೇಲೆ ಸಾಕಷ್ಟು ಗೀಚುಗಳು ಬಿದ್ದಿದ್ದವು. ಅದು ಡೆಮೊ ಪೀಸ್ ಆಗಿತ್ತು. ಇದನ್ನು ಗಮನಿಸಿದ ದೂರುದಾರ/ಗ್ರಾಹಕ ತಾನು ಖರೀದಿಸಿದಂತಹ ಹೊಸ ವಿನ್ಯಾಸದ ಪ್ರಿಡ್ಜ್ನ್ನು ಎದುರುದಾರ ಕೊಡದೇ ತನಗೆ ಮೋಸ ಮಾಡಿರುವುದು ಕಂಡುಬಂತು. ಆ ಸಂಗತಿಯನ್ನು ದೂರುದಾರ ಎದುರುದಾರ ಗಮನಕ್ಕೆ ತಂದು ಹೊಸ ಪ್ರಿಡ್ಜ್ ಬದಲಾಯಿಸಿಕೊಡುವಂತೆ ಸಾಕಷ್ಟು ಸಲ ವಿನಂತಿಸಿದರೂ ಎದುರುದಾರರು ಅವರ ಬೇಡಿಕೆಗೆ ಮನ್ನಿಸಲಿಲ್ಲ. ಇದರಿಂದ ಮನನೊಂದ ಗ್ರಾಹಕ ಅರುಣ ಭಟ್ಟೂರ ಇವರು ತನಗೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಹೇಳಿ ಹುಬ್ಬಳ್ಳಿಯ ಜೆ.ಟಿ.ಕೆ. ಅರಿಹಂತ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದಿ. 12/02/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರರು ರೂ.31,650 ಹಣ ಕೊಟ್ಟು ಹೊಸ ಪ್ರಿಡ್ಜ್ ಖರೀದಿಸಿದ್ದರು. ಎದುರುದಾರರು ಅವರಿಗೆ ಹೊಸ ಪ್ರಿಡ್ಜ್ ಕೊಡುವ ಬದಲು ಉಪಯೋಗಿಸಿದ ಮತ್ತು ಗೀಚಾದ ಹಳೆಯ ಡೆಮೊ ಪೀಸ್ ಕೊಟ್ಟಿರುವುದು ಸಾಕ್ಷಾಧಾರಗಳಿಂದ ರುಜುವಾತಾಗಿದೆ. ವ್ಯವಹಾರದಲ್ಲಿ ವಿಶ್ವಾಸ ಮುಖ್ಯವಾಗಿರುತ್ತದೆ. ಹೊಸ ಪ್ರಿಡ್ಜ್ ಕೊಡುವುದಾಗಿ ಹೇಳಿ ಅದಕ್ಕೆ ತಗಲುವ ಹಣ ದೂರುದಾರರಿಂದ ಪಡೆದು ಅವರಿಗೆ ಹಳೆಯ ಮತ್ತು ಗೀಚಾದ ಡೆಮೊ ಪೀಸ್ ಕೊಟ್ಟಿರುವುದು ಗ್ರಾಹಕನಾದ ದೂರುದಾರನಿಗೆ ಮೋಸವೆಸಗಿ ಎದುರುದಾರರು ಸೇವಾ ನ್ಯೂನ್ಯತೆ ಮಾಡಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಈಗಾಗಲೇ ಕೊಟ್ಟಿರುವ ಡೆಮೊ ಪೀಸ್ ಪ್ರಿಡ್ಜ್ ನ್ನು ಚಿಂಚಳಿಯ ದೂರುದಾರ ಮನೆಯಿಂದ ಎದುರುದಾರರು ತಂದು ಅದೇ ಕಂಪನಿಯ ಮತ್ತು ವಿನ್ಯಾಸದ ಹೊಸ ಪ್ರಿಡ್ಜ್ನ್ನು ಕೊಡುವಂತೆ ಎದುರುದಾರನಿಗೆ ನಿರ್ದೇಶಿಸಿದೆ. ಒಂದು ತಿಂಗಳ ಒಳಗಾಗಿ ಎದುರುದಾರರು ಆ ರೀತಿ ಮಾಡದಿದ್ದಲ್ಲಿ ದಿ. 05/11/2023 ರಿಂದ ಶೇ. 8ರಂತೆ ಬಡ್ಡಿ ಲೆಕ್ಕ ಹಾಕಿ ಪ್ರಿಡ್ಜ್ ಖರೀದಿಯ ಹಣ ರೂ.31,650ಗಳನ್ನು ಎದುರುದಾರರಿಂದ ದೂರುದಾರರು ವಸೂಲಿ ಮಾಡಲು ಅರ್ಹರಿದ್ದಾರೆಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. ಎದುರುದಾರ ಮಾಡಿರುವ ಅನುಚಿತ ವ್ಯಾಪಾರಕ್ಕಾಗಿ ಅವರು ದೂರುದಾರರಿಗೆ ರೂ.25,000 ಪರಿಹಾರ ಮತ್ತು ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000 ನೀಡುವಂತೆ ಎದುರುದಾರ ಜೆ.ಟಿ.ಕೆ. ಅರಿಹಂತ ಅಪ್ಲಾಯನ್ಸ್ಸ್ ಗೆ ಆಯೋಗ ತನ್ನ ತೀರ್ಿನಲ್ಲಿ ನಿರ್ದೇಶಿಸಿದೆ.