ಹೊಸ್ತಿಲ ಹುಣ್ಣಿಮೆ: ಮ್ಯೆಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ
ಹೂವಿನಹಡಗಲಿ 27: ಪ್ರಸಿದ್ಧ ಸುಕ್ಷೇತ್ರಗಳಲ್ಲಿ ಒಂದಾಗಿರುವ ಮೈಲಾರ ಲಿಂಗೇಶ್ವರ ದೇಗುಲಕ್ಕೆ ಹುಣ್ಣಿಮೆಯ ದಿನ ನಾಡಿನ ನಾನಾ ಕಡೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.
ಸೋಮವಾರ ರಾತ್ರಿಯಿಂದಲೇ ಸಾವಿರಾರು ಭಕ್ತರ ದಂಡು ಸುಕ್ಷೇತ್ರಕ್ಕೆ ಆಗಮಿಸಿ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದರು. ಮಂಗಳವಾರ ಹುಣ್ಣಿಮೆ ನಿಮಿತ್ತ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಸೇರಿ ನಾನಾ ವಿಧದ ಭಂಡಾರ ಪೂಜೆಗಳನ್ನು ನೆರವೇರಿಸಲಾಯತು. ದೋಣಿಯಲ್ಲಿ ಬಾಳೆ ಹಣ್ಣು ತುಪ್ಪ ನೈವೇದ್ಯವನ್ನು ಕಟ್ಟಿಗೆ ದೋಣಿಗೆ ತುಂಬಿಸಿ ತಮ್ಮ ಭಕ್ತಿಯನ್ನ ಮೆರೆದರು. ದೇಗುಲದ ಆವರಣದಲ್ಲಿ ಕೆಲವರು ಗೊರವಪ್ಪನ ವೇಷ ಧರಿಸಿ, ಇನ್ನೂ ಕೆಲವರು ಚಾಟಿಯಿಂದ ಹೊಡೆದುಕೊಳ್ಳುತ್ತ ಸ್ವಾಮಿಗೆ ಹರಕೆ ತೀರಿಸಿದರು. ಈ ಸಂದರ್ಭ ಏಳು ಕೋಟಿ, ಏಳು ಕೋಟಿ ಏಳು ಕೋಟಿಗೋ ಎಂಬ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನಾನ ಕಡೆಯಿಂದ ಆಗಮಿಸಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಸಾರಿಗೆ: ಹುಣ್ಣಿಮೆ ನಿಮಿತ್ತ ಸುಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆ ಹೂವಿನಹಡಗಲಿ, ಹರಪನಹಳ್ಳಿ, ದಾವಣಗೆರೆ, ರಾಣೆಬೆನ್ನೂರು, ಹಾವೇರಿ ಸೇರಿ ನಾನಾ ಸಾರಿಗೆ ಘಟಕಗಳಿಂದ ವಿಶೇಷ ಬಸ್ ಸೌಲಭ್ಯವನ್ನೂ ಒದಗಿಸಲಾಗಿತ್ತು.