ಸರಳವಾಗಿ ರಂಗಪಂಚಮಿ ಹಬ್ಬ ಆಚರಣೆ
ಶೇಡಬಾಳ 02: ಕಾಗವಾಡ, ಶೇಡಬಾಳ, ಉಗಾರ ಮೊದಲಾದ ಗ್ರಾಮಗಳಲ್ಲಿ ಯುವಕರು ರಂಗಪಂಚಮಿ ಹಬ್ಬವನ್ನು ಪರಸ್ಪರರಿಗೆ ಬಣ್ಣ ಎರಚುವುದರ ಮೂಲಕ ಸರಳವಾಗಿ ಆಚರಿಸಿದರು.
ರಾಜ್ಯಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸರಳವಾಗಿ ರಂಗಪಂಚಮಿ ಹಬ್ಬವನ್ನು ಆಚರಿಸಿದ ಈ ಗ್ರಾಮಗಳಲ್ಲಿನ ಯುವಕರು ಹಿಂದು ಮುಸ್ಲಿಂ ಎಂಬ ಭೇದಭಾವ ಎಸಗದೇ ಪರಸ್ಪರರಿಗೆ ಬಣ್ಣವನ್ನು ಎರಚುತ್ತಾ ಸಂಗೀತದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿದು ಸಂಭ್ರಮಿಸಿದರು. ಗ್ರಾಮೀಣ ಭಾಗದಲ್ಲಿ ರಂಗಪಂಚಮಿ ಹಬ್ಬ ಬಂತೆಂದರೆ ಎಲ್ಲರೂ ಧರ್ಮಿಯರು ಒಂದಾಗಿ ಬಡವ, ಶ್ರೀಮಂತ, ದೀನ ದಲಿತ ಎಂಬ ತಾರತಮ್ಯ ಮಾಡದೇ ಮುಂದೆ ಬರುವವರಿಗೆ ಬಣ್ಣವನ್ನು ಎರಚಿ ಕೇಕೆ ಹಾಕಿ ಸಂಭ್ರಮಿಸುವ ಹಬ್ಬ ಇದಾಗಿದೆ. ಬಣ್ಣ ಎರಚಿದ್ದಕ್ಕೆ ಯಾರು ಸಿಟ್ಟಾಗದೇ ಮಧ್ಯ ವಯಸ್ಸಿನವರು ಕೂಡಾ ಯುವಕರೊಂದಿಗೆ ಯುವಕರಾಗಿ ಆನಂದಿಸುವುದನ್ನು ನಾವು ಈ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸರ್ವ ಧರ್ಮ ಸಮ ಭಾವನೆ ಜಾತ್ಯಾತೀತ ತತ್ವವನ್ನು ಸಾರುವ ಏಕೈಕ ಹಬ್ಬ ರಂಗಿನಾಟಕದ ಹಬ್ಬವಾಗಿದೆ.
ಶೇಡಬಾಳ ಗ್ರಾಮದ ಬಸವನ ಅಗಸಿಯ ರಣಝುಂಜಾರ ಯುವಕ ಮಂಡಳ, ಸುಭಾಷ ಚೌಕ, ವರ್ಧಮಾನ ಪೇಠೆ, ಸಾರವಾನ ಗಲ್ಲಿ, ಅಂಬೇಡಕರ ಗಲ್ಲಿ ಯುವಕರು ಮುಂಜಾನೆ 8 ರಿಂದ ಸಂಜೆ 4 ರವರೆಗೆ ರಂಗನಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.