ಅಥಣಿ

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ಮಾನವ ಧರ್ಮ: ಸ್ವಾಮೀಜಿ

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ಮಾನವ ಧರ್ಮ: ಸ್ವಾಮೀಜಿ

ಲೋಕದರ್ಶನ ವರದಿ 


ಅಥಣಿ 25: ಲಿಂ. ಬಾಳಕೃಷ್ಣ ಮಹಾರಾಜರು ನಂಬಿದ ಎಲ್ಲ ಭಕ್ತರಿಗೂ ದಾರೀದೀಪವಾಗಿದ್ದಾರೆ. ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಪ್ರಾಣಿ ಪಕ್ಷಿಗಳನ್ನು ಸಾಕಿ ಸಲುಹಿ ಕೆಲವು ಸಲ ತಾವು ಉಪವಾಸ ವನವಾಸ ಅನುಭವಿಸಿ ಪ್ರಾಣಿ ಪಕ್ಷಿಗಳ ಉದರ ತುಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಕ್ಕು ಪಾರಿವಾಳ ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು ಅವರ ಅವಧಿಯಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸಿದ್ದು ಇತಿಹಾಸದಲ್ಲಿ ಶಾಶ್ವತ ಮೈಲುಗಲ್ಲಾಗಿ ಉಳಿದಿದೆ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. 

ತಾಲೂಕಿನ ಸತ್ತಿ ಗ್ರಾಮದ ಬಾಳಕೃಷ್ಣ ಮಹಾರಾಜ ಸಮುದಾಯ ಭವನದಲ್ಲಿ  ಲಿಂ. ಬಾಳಕೃಷ್ಣ ಮಹಾರಾಜರ 24 ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜರುಗಿದ ಪ್ರವಚನ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡುತ್ತಾ ಕಷ್ಟದಲ್ಲಿ ಇದ್ದವರಿಗೆ ಸಹಾಯ ಸಹಕಾರ ಮಾಡುವುದೇ ನಿಜವಾದ ಮಾನವ ಧರ್ಮ. ಮಾನವ ಜನ್ಮ ಎಲ್ಲರಿಗೂ ದೊರೆಯುವಂತಹದಲ್ಲ ದೊರೆತ ಮೇಲೆ ಅದು ಸಾರ್ಥಕವಾಗುವಂತೆ ಎಲ್ಲರೂ ಬದುಕಬೇಕು. ಬಡವರು ನಿರ್ಗತಿಕರ ಸೇವೆ ಮಾಡುವ ಮೂಲಕ ದೇವರ ಕೃಪೆಗೆ ಪ್ರತಿಯೊಬ್ಬರೂ ಪಾತ್ರರಾಗಲು ಸಾಧ್ಯವಿದೆ ಎಂದು ಅವರು ಹೇಳಿದರು. 

ವಿಜಯಪುರ ಸಿದ್ದಾರೂಢ ಆಶ್ರಮದ ಮಾತೋಶ್ರೀ ಯೋಗಿಶ್ವರಿ ಅವರು ಮಾತನಾಡಿ ಎಲ್ಲ ಪ್ರಾಣಿಗಳಲ್ಲಿ ಮಾನವನ ಬುದ್ಧಿಶಕ್ತಿ ಅತ್ಯಂತ ಶ್ರೇಷ್ಠವಾಗಿದೆ. ಬುದ್ಧಿಶಕ್ತಿಯಿಂದಲೆ ಮಾನವನಿಗೆ ಬೆಲೆ ಬರಲು ಕಾರಣವಾಗಿದೆ ಎಂದು ಹೇಳಿದರು.  

ಸ್ಥಳಿಯ ಕಾಡಸಿದ್ದೇಶ್ವರ ಮಠದ ಕಾಡಯ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಗಡಿನಾಡು ಕಲಾವಿದರ ಸಂಘದ ಅಧ್ಯಕ್ಷ ಶ್ರೀಶೈಲ ಜಕ್ಕಪ್ಪನವರ ಹಾಗೂ ಶಿಕ್ಷಕ ಮಹಾದೇವ ಹಾದಿಮನಿ ಸಂಗೀತ ಸೇವೆ ಸಲ್ಲಿಸಿದರು. ಆನಂದಕುಮಾರ ಪಾಟೀಲ ನಿರೂಪಿಸಿದರು. ಶಂಕರ ಮಟ್ಟೆಪ್ಪನವರ ವಂದಿಸಿದರು. 


ಸುದ್ದಿ ಓದಿ