ಅಲೆಮಾರಿಗಳಿಗೆ ಸಹಾಯಹಸ್ತ ನೀಡಿ : ದೊಡಮನಿ
ಗುಳೇದಗುಡ್ಡ 29: ಕೊರೊನಾ ಸಂಕಷ್ಟದ 2ನೇ ಅಲೆಯ ಸಂದರ್ಭದಲ್ಲಿ ತಳಸಮುದಾಯಗಳಾದ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳಿಗೆ ಸರ್ಕಾರದಿಂದ ವಿಶೇಷ ಆರ್ಥಿಕ ಪರಿಹಾರ, ಆಹಾರ ಧಾನ್ಯ, ಓಷಧಿ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ನೀಡಿಲ್ಲ. ಇನ್ನಾದರೂ ಶೀಘ್ರದಲ್ಲೇ ವಿತರಣೆ ಮಾಡಲಿ ಎಂದು ಇಲ್ಲಿನ ಕರ್ನಾಟಕ ರಾಜ್ಯದ ಅಲೆಮಾರಿ ಶಿಳ್ಳೇಕ್ಯಾತ ಸಮುದಾಯದ ರಾಜ್ಯಾಧ್ಯಕ್ಷ ಡಾ. ಸಣ್ಣವೀರಣ್ಣ ದೊಡ್ಡಮನಿ ಆಗ್ರಹಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ತೊಗಲುಗೊಂಬೆ ಆಡಿಸುವ ಅಲೆಮಾರಿ ಶಿಳ್ಳೇಕ್ಯಾತರು, ಸಿಕ್ಲಗಾರ, ಬುಡುಬುಡಿಕೆ, ದುರಗಮುರಿಗಿ, ಹಕ್ಕಿಪಿಕ್ಕಿ, ಚೆನ್ನಾದಾಸರ, ಗೋಸಂಗಿ, ಗೋಂಧಳಿ, ಕೊರಮ, ಕೊರಚ ಮುಂತಾದ ಬುಡಕಟ್ಟು ಸಮುದಾಯಗಳ ಕಲಾವಿದರು ಮತ್ತು ಸಮುದಾಯದ ಜನ ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸಲು ಸಾಧ್ಯವಾಗದೆ ಹಸಿವಿನಿಂದ ಬಳಲುತ್ತಿದ್ದಾರೆ. ಸರ್ಕಾರ ನಿರ್ಗತಿಕ ಸಮುದಾಯಗಳನ್ನು ಹೃದಯದಿಂದ ನೋಡಿ ಅವರ ಜೀವನಕ್ಕೆ ಪರಿಹಾರ, ಆಹಾರ ಧಾನ್ಯ ಮತ್ತು ಆರೋಗ್ಯದ ಕಿಟ್ಗಳನ್ನು ಬಹಳ ತುರ್ತಾಗಿ ವಿತರಣೆ ಆಗಬೇಕೆಂದು ಕರ್ನಾಟಕ ರಾಜ್ಯದ ಅಲೆಮಾರಿ ಶಿಳ್ಳೇಕ್ಯಾತ ಸಾಮಾಜದ ರಾಜ್ಯಾಧ್ಯಕ್ಷ ಡಾ. ಸಣ್ಣವೀರಣ್ಣ ದೊಡ್ಡಮನಿ ಆಗ್ರಹಿಸಿದ್ದಾರೆ.