ಆರೋಗ್ಯ ಇಲಾಖೆಯ ಕುಂದು ಕೊರತೆ ಸಭೆ
ಕಾಗವಾಡ 16: ಕಾಗವಾಡ ತಾಲೂಕಿನ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳೊಂದಿಗೆ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷೇತ್ರದ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲರು ಸಭೆಯನ್ನು ಆಯೋಜಿಸಿ ಆರೋಗ್ಯ ಇಲಾಖೆಯ ಕುಂದು ಕೊರತೆ ಆಲಿಸಿದರು.
ಮಂಗಳವಾರ ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ಸಭಾ ಭವನದಲ್ಲಿ ಸಚಿವರು ಆರೋಗ್ಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆ ಹಮ್ಮಿಕೊಂಡಿದ್ದರು. ಅಥಣಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಬಸಗೌಡ ಕಾಗೆ, ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗೆ ಇವರ ಉಪಸ್ಥಿತಿಯಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಆರೋಗ್ಯಾಧಿಕಾರಿಗಳಾದ ಡಾ. ಬಸಗೌಡ ಕಾಗೆ, ಕಾಗವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ ಇವರು ಮಾಹಿತಿ ನೀಡಿದರು. ತಾಲೂಕಿನ ಇನ್ನೂಳಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಮಸ್ಯೆಗಳು ಸಚಿವ ಶ್ರೀಮಂತ ಪಾಟೀಲರು ಆಲಿಸಿದರು.
ಪಶು ವೈದ್ಯಾಧಿಕಾರಿಗಳ ಸಭೆ:
ಇದೇ ಸಭಾ ಭವನದಲ್ಲಿ ಸಚಿವ ಶ್ರೀಮಂತ ಪಾಟೀಲ, ಕಾಗವಾಡ ತಾಲೂಕಾ ಮಟ್ಟದ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ಹಮ್ಮಿಕೊಂಡು ಅವರ ಸಮಸ್ಯೆಗಳು ಆಲಿಸಿದರು.
ಸಭೆಯಲ್ಲಿ ಪಶು ಪಾಲನೆ ಮತ್ತು ವೈದ್ಯಕೀಯ ಸೇವೆ ಇಲಾಖೆಯ ತಾಲೂಕಾ ಸಹಾಯಕ ನಿರ್ದೇಶಕರಾದ ಡಾ. ಎಂ.ಎಸ್.ಹುಂಡೆಕರ ಸಚಿವರಿಗೆ ಮಾಹಿತಿ ನೀಡುವಾಗ ತಾಲೂಕಿನಲ್ಲಿ 8 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಇದರಲ್ಲಿ ಶೇಡಬಾಳ ಮತ್ತು ಶಿರಗುಪ್ಪಿ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲವೆಂದು ಹೇಳಿ ಅನೇಕ ತೊಂದರೆಗಳು ಸಚಿವರ ಮುಂದೆ ಬಿಚ್ಚಿ ಹೇಳಿದರು. ಸಚಿವರು ಇದನ್ನು ಆಲಿಸಿ ಕೂಡಲೆ ಶೇಡಬಾಳ ಕೇಂದ್ರದಲ್ಲಿ ಅತ್ಯಾಧುನಿಕ ಪಶು ಚಿಕಿತ್ಸಾಲಯ ನಿರ್ಮಿಸುವದಾಗಿ ಭರವಸೆ ನೀಡಿದರು.
ಡಾ. ಬಸಗೌಡ ಕಾಗೆ ಮಾತನಾಡುವಾಗ, ಕಾಗವಾಡ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆ ಶೇ. 50ರಷ್ಟು ಇದೆ. ಸಿಬ್ಬಂದಿಗಳ ನೇಮಕಾತಿ ತುರ್ತಾಗಿವಾದರೆ ಜನರಿಗೆ ಸೇವೆ ನೀಡಲು ಸಹಾಯವಾಗಲಿದೆಯೆಂದು ಸಚಿವರ ಗಮನಕ್ಕೆ ಈ ವಿಷಯ ತಂದಿದ್ದು, ಇದರ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆಯೆಂದರು.
ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಇಡೀ ರಾಜ್ಯಾದ್ಯಂತ ವೈದ್ಯರ ಕೊರತೆಯಿದೆ. ಇದು ಕೋವಿಡ್ ಕಾಲದಲ್ಲಿ ಬಹಳಷ್ಟು ಅನುಭವಿಸಿದ್ದೇವೆ. ಇದ್ದರೊಂದಿಗೆ ಇನ್ನೂಳಿದ ಸಿಬ್ಬಂದಿಗಳ ಹುದ್ದೆಯೂ ಖಾಲಿಯಿವೆ. ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳು ಇತ್ಯರ್ಥಗೊಳಿಸುತ್ತೇನೆ. ಉಪಚಾರಿಸಲು ಅವಶ್ಯಕತೆಯಿರುವ ಎಲ್ಲ ಉಪಕರಣಗಳು ಪೂರೈಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಸಚಿವ ಶ್ರೀಮಂತ ಪಾಟೀಲರು ಪಶು ಚಿಕಿತ್ಸೆ ವ್ಯವಸ್ಥೆ ಬಗ್ಗೆ ಮಾತನಾಡುವಾಗ, ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದಲ್ಲಿಯ ಗ್ರಾಮಸ್ಥರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಮೇಲೆ ಅಲಂಬಿತರಾಗಿದ್ದಾರೆ. ಈ ಪಶುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ. ಈ ಕಾರಣ ಕಾಗವಾಡ ತಾಲೂಕಾ ಮಟ್ಟದ ಪಶು ಚಿಕಿತ್ಸಾಲಯ ಮತ್ತು ಶೇಡಬಾಳ ಪಶು ಚಕಿತ್ಸಾಲಯ ಕೇಂದ್ರದಲ್ಲಿ ಅತ್ಯಾಧುನಿಕ ವ್ಯವಸ್ಥೆ ನೀಡುವ ನನ್ನ ಗುರಿಯಾಗಿದೆ. ಈ ಬಗ್ಗೆ ಸಂಬಂಧಿತ ಇಲಾಖೆಯ ಸಚಿವರೊಂದಿಗೆ ಚರ್ಚಿಸಿದ್ದೇನೆಂದರು.
ಈ ವೇಳೆ ತಾಲೂಕಾ ಮಟ್ಟದ ಅನೇಕ ಗ್ರಾಮಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ಮಾತನಾಡಿದರು.