ಗೋಕಾಕ್

ಹಡಪದ ಅಪ್ಪಣ್ಣ ಸಮಾಜಕ್ಕೆ ಸರಕಾರದ ಸಹಕಾರ ಅವಶ್ಯ: ಸುರೇಶ

ಹಡಪದ ಅಪ್ಪಣ್ಣ ಸಮಾಜಕ್ಕೆ ಸರಕಾರದ ಸಹಕಾರ ಅವಶ್ಯ: ಸುರೇಶ

ಗೋಕಾಕ 21: ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಲಿಂಗಾಯತ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಗಲಿರಳೂ ಶ್ರಮಿಸಿದ ಅವಿರಳ ಜ್ಞಾನಿ ಹಡಪದ ಅಪ್ಪಣ್ಣನವರ ಸಮಾಜಕ್ಕೆ ಸರಕಾರದ ಸಂಪೂರ್ಣ ಸಹಕಾರವಿಂದು ಅವಶ್ಯವಾಗಿದೆ ಎಂದು ಬೆಳಗಾವಿ ಘಟಕದ ಅಧ್ಯಕ್ಷ ಸುರೇಶ ಅಭಿಪ್ರಾಯಿಸಿದರು.

ಗೋಕಾಕ ನಗರಸಭೆಯ ಸಭಾ ಸಮುದಾಯ ಭವನದಲ್ಲಿ ಶನಿವಾರ ದಿ. 20ರಂದು ಆಯೋಜಿಸಿದ ನೂತನ ಸಮಾಜ ತಾಲ್ಲೂಕಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕಿತ್ತೂರ ಅವರು ಸಮಾಜದ ಪ್ರಗತಿಗೆ ಸರ್ವರೂ ಕೈ ಜೋಡಿಸಲು ಕರೆ ನೀಡಿದರು. ಜಿಲ್ಲಾ ಕಾರ್ಯಾಧ್ಯಕ್ಷರಾದ ಸಂತೋಷ ಹಡಪದ ಅವರು ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜದ ಒಗ್ಗಟ್ಟನ್ನು ಪರದರ್ಶಿಸಲು ಸಮಾಜ ಬಂಧುಗಳೆಲ್ಲರೂ ಸದಸ್ಯತ್ವ ಸ್ವೀಕರಿಸಲು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ಕಾರ್ಮಿಕ ಕಲ್ಯಾಣ ನಿರೀಕ್ಷಕರಾದ ಪಾಂಡುರಂಗ ಮಾವರಕರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಮಹಾಂತೇಶ ತಾಂವಶಿ, ಶಂಕರ ಅಯ್ಯಪ್ಪ ಕಟ್ಟಿಮನಿ, ಮಂಗಲಾದೇವಿ ಈಶ್ವರಚಂದ್ರ ಬೆಟಗೇರಿ ಮುಂತಾದವರು ವೇದಿಕೆಯಲ್ಲಿದ್ದರು. ಗೋಕಾಕ ತಾಲ್ಲೂಕಾ ಘಟಕದ ಅಧ್ಯಕ್ಷ ಖನಗಾಂವದ ಸಿದ್ದಪ್ಪ ಮಹಾದೇವಪ್ಪ ನಾವಲಗಿ, ಉಪಾಧ್ಯಕ್ಷ ಶಿವಲಿಂಗ ಗಣಪತಿ ಯರನಾಳ, ಅರ್ಜುನ ಬಸಪ್ಪ ನಾವಿ, ಬೆಣಚಿನಮರಡಿ, ಕಾರ್ಯಾದರ್ಶಿಯಾಗಿ ಮೇಲ್ಮಟ್ಟಿಯ ಶ್ರೀಪಾದ ಲಕ್ಷ್ಮಣ ನಾವಿ, ಖಜಾಂಚಿಯಾಗಿ ಕೌಜಲಗಿಯ ಹನಮಂತ ಹೊರಗಿನಮನಿ, ಸಂಘಟನಾ ಕಾರ್ಯದರ್ಶಿಗಳಾಗಿ ಘಟಪ್ರಭಾದ ಸಂತೋಷ ನಾವಿ, ಅಂಕಲಗಿಯ ಮಲ್ಲಿಕಾರ್ಜುನ ಹಡಪದ, ಮಲ್ಲಪ್ಪ ಬಸಪ್ಪ ನಾವಿ, ನಾಗಪ್ಪ ಈರಪ್ಪ ಹಂಪಣ್ಣವರ, ದೊಡ್ಡಪ್ಪ ಮಲ್ಲಪ್ಪ ವಿಜಾಪೂರ ಕಾನೂನು ಸಲಹೆಗಾರರಾಗಿ ಆಯ್ಕೆಯಾಗಿ, ಸಾನ್ನಿಧ್ಯ ವಹಿಸಿದ್ದ ಕಪರಟ್ಟಿಯ ಪೂಜ್ಯ ಬಸವರಾಜ ಸ್ವಾಮಿಗಳಿಂದ ಸನ್ಮಾನಿತರಾದರು.

ಜಾನಪದ ರಂಗಭೂಮಿ ಹಿರಿಯ ಕಲಾವಿದ ಈಶ್ವರಚಂದ್ರ ಬಟಗೇರಿ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಾದ ನಾವಿ ಸ್ವಾಗತಿಸಿದರು. ಅನೀಲಕುಮಾರ ಯರನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಡಪದ ಸೈನ್ಯ ನೇತೃತ್ವ ವಹಿಸಿದ ಮಹಾಂತೇಶ ಬೆಟಗೇರಿ ವಂದಿಸಿದರು. ತಾಲ್ಲೂಕಾ ಸಮಾಜ ಬಾಂಧವರೆಲ್ಲರೂ ಉಪಸ್ಥಿತರಿದ್ದರು. ಮಂಗಲ ಹಾಗೂ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸುದ್ದಿ ಓದಿ