ಭಾವೈಖ್ಯತೆಗೆ ಶ್ರೀಮಠದ ಪರಂಪರೆ ಅನುಕರಣೀಯ : ಶಂಕರ ಪೂಜಾರಿ
ಗುಳೇದಗುಡ್ಡ 19: ಯಾವುದೇ ಜಾತಿ, ಧರ್ಮವನ್ನು ಎತ್ತಿ ಹಿಡಿಯದೇ ಸಕಲ ಧರ್ಮ,ಜಾತಿಗಳು ಒಂದೇ ಎಂದು ಸಾರುವ ವಚನಗಳು ಮನುಕುಲದ ಉದ್ಧಾರಕ್ಕೆ ದಾರೀದೀಪವಾಗಿವೆ. ಜಾತಿರಹಿತ ಸಮಾಜ ಅಗತ್ಯವೆನ್ನುವ ಶ್ರೀಮಠದ ತತ್ವ ಭಾವೈಖ್ಯತೆಗೆ ಮಾದರಿಯಾಗಿದ್ದೂ ಎಲ್ಲ ಮಠಗಳಿಗೆ ಅನುಕರಣೀಯವಾಗಿದೆ ಎಂದು ಕರ್ನಾಟಕ ಪ್ರದೇಶ ಮಾದಿಗರ ಸಂಘದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ ಹೇಳಿದರು.
ಅವರು ಭಾನುವಾರ ಜರುಗಿದ ಶ್ರೀ 1008 ಕರ್ತೃ ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳವರ 36 ನೇ ವಾರ್ಷಿಕ ಪುಣ್ಯಾರಾಧನೆಯ ಮೊದಲ ದಿನದ ಪ್ರಭಾತ ಯಾತ್ರೆಯ ನೇತೃತ್ವವಹಿಸಿ ಮಾತನಾಡಿ, ನಾವು ಮೋಕ್ಷವನ್ನು ಪಡೆಯಲು ವಚನಗಳ ಅಂತರಾಳವನ್ನು ಅರಿತು ಬದುಕಬೇಕು. 12 ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ ಭೇದವೆನ್ನದೆ ಎಲ್ಲರೂ ಒಂದು ಎನ್ನುವ ಜಾತ್ಯಾತೀತ ಸಮಾಜ ಕಟ್ಟಲು ಹಗಲಿರುಳು ಶ್ರಮಿಸಿದರು. ಅದರಂತೆ ಇಂದು ರಾಜ್ಯದಲ್ಲಿಯೇ ವಿಶಿಷ್ಟ ಕಾರ್ಯಗಳನ್ನು ಮಾಡುವ ಮೂಲಕ ಬಸವಣ್ಣನವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವುದು ಶ್ರೀ ಗುರುಸಿದ್ಧೇಶ್ವರ ಮಠದ ಕಾರ್ಯ ಶ್ಲಾಘನೀಯ. ಮಾದರ ಚೆನ್ನಯ್ಯನ ಜಯಂತಿಯೊಂದಿಗೆ ಆರಂಭವಾದ ಶರಣ ಸಂಗಮ ಕಾರ್ಯಕ್ರಮ ಎಲ್ಲ ಧರ್ಮ, ಜಾತಿಗಳು ಒಂದು ಎಂಬ ಪರಂಪರೆಯನ್ನು ಹುಟ್ಟು ಹಾಕಿದೆ ಎಂದರು.
ಶರಣ ಧ್ವಜಾರೋಹಣವನ್ನು ಕೊಟೇಕಲ್ನ ಶ್ರೀಮಂತ ಭುಜಂಗರಾವ್ ದೇಸಾಯಿ ನೆರವೇರಿಸಿದರು. ಮಠದ ಹಿರಿಯ ಶ್ರೀಗಳಾದ 1008 ಬಸವರಾಜ ಪಟ್ಟದಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು. ಶ್ರೀಮಠದ ಕಿರಿಯ ಶ್ರೀಗಳಾದ ಗುರುಬಸವ ದೇವರು ಆಶೀರ್ವಚನ ನೀಡಿ, ಭೂಮಿಯ ಮೇಲೆ ಸಣ್ಣವರು, ದೊಡ್ಡವರು ಅಂತ ಇರುವುದಿಲ್ಲ. ಯಾಕೆಂದರೆ ಎಲ್ಲರೂ ಕುಡಿಯುವುದೊಂದೆ ನೀರು, ಉಸಿರಾಡಲು ಗಾಳಿಯೊಂದೆ, ತಿನ್ನುವ ಆಹಾರವೊಂದೆ ಇರುತಿರಲು ಜಾತಿ-ಮತದಿಂದ ದೊಡ್ಡವ, ಸಣ್ಣವ ಎಂದು ಹೇಳುವುದು ಸರಿಯಲ್ಲ ಎಂದರು.
ಎಚ್.ಎಸ್.ಹುಳಿಪಲ್ಲೇದ ಅವರನ್ನು ಗೌರವಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ನಾಗೇಶಪ್ಪ ಪಾಗಿ, ಭಕ್ತರಾದ ಬಸವರಾಜ ತಾಂಡೂರ, ಶಿವಾನಂದ ಜವಳಿ, ಈರಣ್ಣಾ ಶೇಖಾ, ಮಹಾಂತೇಶ ಪಾಗಿ ಸೇರಿದಂತೆ ಇತರರು ಇದ್ದರು.