ಧಾರವಾಡ - ಹುಬ್ಬಳ್ಳಿ

ಗುರು ಆರಾಧನೆ ಕಾರ್ಯಕ್ರಮ

ಗುರು ಆರಾಧನೆ ಕಾರ್ಯಕ್ರಮ

ಧಾರವಾಡ 19: ಗುರುಗಳು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಬೇಕು ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಡುವುದು ಅವರ ಆದ್ಯತೆಯಾಗಬೇಕು ಸಮಾಜದಲ್ಲಿ ಉನ್ನತ ಸ್ಥಾನವಿರುವುದು ಗುರುಗಳಿಗೆ ಮಾತ್ರ ಉತ್ತಮ ಶಿಕ್ಷಣ ದೊರೆಯುವುದು ಕೇವಲ ಉತ್ತಮ ಕಟ್ಟಡಿಗಳಿಂದಲ್ಲ, ಅಲ್ಲಿರುವ ಶಿಕ್ಷಕರಿಂದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯುವ ಶಿಕ್ಷಣ ನೈತಿಕ ತಳಹದಿಯ ಮೇಲೆ ನೀಡುವುದರಿಂದ ವಿದ್ಯಾರ್ಥಿಗಳು ಪ್ರತಿಭಾವಂತರು ಮಾತ್ರವಲ್ಲದೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಎಸ್‌. ಡಿ. ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜೀವಂಧರಕುಮಾರವರು ಸವದತ್ತಿ ರಸ್ತೆಯಲ್ಲಿರುವ ಜೆ.ಎಸ್‌.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯ ನಿಮಿತ್ತ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. 

 ಅನಾದಿಕಾಲದಿಂದಲೂ ನಾವು ಗುರುಗಳಿಗೆ ಗೌರವನ್ನು ನೀಡುತ್ತಾ ಬಂದಿದೆ. ಒಂದು ದೇಶದ ಅಭಿವೃದ್ಧಿಯಾಗಬೇಕಾದರೆ ಅಲ್ಲಿಯ ಶಿಕ್ಷಣ ವ್ಯವಸ್ಥೆ ಉತ್ತಮವಾಗಿರಬೇಕು. ಪುರಾಣ ಕಥೆಗಳಿಂದ ಹಿಂದಿನ ಕಾಲದ ಗುರುಗಳವರೆಗೂ ಇಲ್ಲಿ ಆಯೋಜಿಸಿರುವ ಪಾತ್ರಗಳು ಅತ್ಯಂತ ನೈಜವಾಗಿ ಮೂಡಿ ಬಂದಿದೆ ಎಂದು ಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವುದಲ್ಲದೇ, ನಮ್ಮ ಆಚಾರ ವಿಚಾರಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತವೆ. ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸುತ್ತದೆ. ಪೂಜ್ಯ ವೀರೇಂದ್ರ ಹೆಗಡೆಯವರು ಹಾಗೂ ಶ್ರೀಮತಿ ಹೇಮಾವತಿ ಅಮ್ಮನವರು ಗ್ರಾಮೀಣ ಭಾಗದ ಜನರಿಗೆ ಒಳ್ಳೆಯ ಶಿಕ್ಷಣ ದೊರೆಯಲೆಂದು ಸ್ಥಾಪಿಸಿದ ಈ ಸಂಸ್ಥೆ ಇಂದು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು  

ಮಹಾಭಾರತ, ರಾಮಾಯಣ, ಗುರುಕುಲ ಪದ್ಧತಿ, ಜಿನಾಲಯ, ಸಾಯಿಬಾಬಾ, ಪೂಜ್ಯ ವೀರೇಂದ್ರ ಹೆಗ್ಗಡೆಯವರು, ಪೇಜಾವರ ಶ್ರೀಗಳು, ಸಿದ್ದೇಶ್ವರ ಸ್ವಾಮಿಗಳು ಮುರುಘಾಮಠದ ಮಹಾಂತಪ್ಪಗಳು ಮುಂತಾದ ಪಾತ್ರಗಳು ನೈಜವಾಗಿ ಮೂಡಿ ಬಂದದ್ದಲ್ಲದೆ, ಪಾಲಕರ ಪ್ರಶಸ್ತಿಗೆ ಪಾತ್ರವಾದವು. 

ಪುಷ್ಪಾವತಿ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯೆ ತ್ರಿವೇಣಿ ಆರ್, ಮಹಾವೀರ ಉಪಾದ್ಯೆ, ಸೂರಜ್ ಜೈನ್, ಜಿನ್ನಪ್ಪ ಕುಂದಗೊಳ, ಬಿ.ಎನ್‌.ಬಾವಿ, ಮೈನಾವತಿ ದಿವಟೆ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ