ಗುರು ಪೂರ್ಣಿಮೆ ವ್ಯಾಸ ಮಹರ್ಷಿಗಳು ಜನ್ಮ ತಾಳಿದ ದಿವಸ: ಸಿದ್ದಲಿಂಗ ಜಗದ್ಗುರುಗಳು
ರಾಣೇಬೆನ್ನೂರು, 22: ವರ್ಷದ 12 ತಿಂಗಳಲ್ಲಿ ಬರುವ ಪ್ರತಿಯೊಂದು ಹುಣ್ಣಿಮೆಗೂ ನಮ್ಮ ಭಾರತೀಯ ಸನಾತನ ಧರ್ಮ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶೇಷತೆಗಳಿವೆ ಇವುಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಧರ್ಮದ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಗುಣ ಧರ್ಮವನ್ನು ಪ್ರತಿಯೊಬ್ಬ ಭಾರತೀಯರು ಅಳವಡಿಸಿ ಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಉಜ್ಜಯನಿ ಮಹಾಪೀಠದ 1008 ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ಅವರು ರವಿವಾರ ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠ ಜಗದ್ಗುರುವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ, ಗುರುಪೂರ್ಣಿಮೆ 278 ನೇ ಜ್ಞಾನವಾಹಿನಿ ಜನಜಾಗ್ರತಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತೀಯರ ಬಹುತೇಕ ಮನೋಭಾವನೆಯಲ್ಲಿ ಆಶಾಡ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿಶಿದ್ದ ಎನ್ನುವ ವಾಡಿಕೆ ಇದೆ. ಆದರೆ ಆಷಾಢ ಮಾಸದಲ್ಲಿ ಬರುವ ಈ ಹುಣ್ಣಿಮೆಗೆ ಬಹು ವಿಶೇಷತೆ ಇದೆ ಎಂದು ಜಗದ್ಗುರುಗಳು ವಿಶ್ಲೇಷಿಸಿ ಮಾತನಾಡಿದರು. ಈ ಮಾಸದಲ್ಲಿ ಮೈಸೂರು ಚಾಮುಂಡೇಶ್ವರಿ ಪಂಡರಾಪುರದ ಪಾಂಡುರಂಗ ಸೇರಿದಂತೆ ರಾಜ್ಯದ ಇನ್ನಿತರೇ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳು, ಧರ್ಮಾಚರಣೆಗಳು ಸಾಂಗೋಪ ಸಾಂಗವಾಗಿ ನೆರವೇರುವುದನ್ನು ಕಾಣುತ್ತೇವೆ. ಲಕ್ಷಾಂತರ ಭಕ್ತರು ಈ ಹುಣ್ಣಿಮೆ ವಿಶೇಷವಾಗಿ ಮಾಡುತ್ತಾರೆ. ಇದು ಶ್ರಾವಣ ಮಾಸದಷ್ಟೇ ಪುಣ್ಯ ಮತ್ತು ಪವಿತ್ರವಾಗಿದೆ ಎಂದರು.
ಗುರು ಎನ್ನುವ ಪದಕ್ಕೆ ಬಹಳಷ್ಟು ಅರ್ಥವಿದೆ ಕೇವಲ ಶಿಕ್ಷಣ ಕೊಟ್ಟವನು ಮಾತ್ರ ಗುರುವಲ್ಲ. ಶಿಕ್ಷಣದ ಜೊತೆಗೆ ಸಮಗ್ರ ಸಂಸ್ಕಾರವನ್ನು ಕೊಟ್ಟವನು ಮಹಾ ಗುರುವಾಗುತ್ತಾನೆ. ಮನೆಯಲ್ಲಿ ಅಕ್ಷರದ ಜೊತೆಗೆ ಮಾತು ಕಲಿಸಿದ ತಾಯಿ, ಬುದ್ಧಿ ಹೇಳಿದ ತಂದೆ, ಬದುಕುವ ಮಾರ್ಗದರ್ಶನ ನೀಡಿ, ಜೀವನ ಪಾಠ ಕಲಿಸಿದವರೊ ಸಹ ಗುರುವಾಗುತ್ತಾನೆ. ಗುರುವಿನಲ್ಲಿ ಅಪಾರ ಶಕ್ತಿ ಇದೆ ಗುರುವಿಗಿಂತ ಬೇರೆ ಯಾರು ದೊಡ್ಡವರಿಲ್ಲ ಗುರುವಿನ ಆಶೀರ್ವಾದ ಪ್ರತಿಯೊಬ್ಬರು ಪಡೆಯಬೇಕು ಇದೇ ಗುರುಪೂರ್ಣಿಮೆ ಎಂದರು.
ದಿವ್ಯ ನೇತೃತ್ವದಲ್ಲಿದ್ದ ಹೊನ್ನಾಳಿ ಹಿರೇಕಲ್ಮಠದ, ಒಡೆಯರ ಶ್ರೀ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಧರ್ಮೋಪದೇಶ, ದಯಪಾಲಿಸಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಅರುಣಕುಮಾರ್ ಪೂಜಾರ ಅವರು, ಸಮಾಜದಲ್ಲಿ ಈ ಹಿಂದೆಗಿಂತಲೂ ಇಂದು ಧರ್ಮದ ಕುರಿತಂತೆ ಜನಜಾಗೃತಿ ಗೊಳಿಸಬೇಕಾದ ಅಗತ್ಯವಿದೆ. ಸಿದ್ದಲಿಂಗ ಜಗದ್ಗುರುಗಳು, ನಮ್ಮ ತಾಲೂಕಿನವರು, ನಮ್ಮವರು ಎಲ್ಲಕ್ಕಿಂತ ಹೆಚ್ಚಾಗಿ ತವರೂರಿನವರು ಎನ್ನುವ ಹೆಮ್ಮೆ ಭಕ್ತಾದಿಗಳಿಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಡೇನಂದಿಹಳ್ಳಿಯ ವೀರಭದ್ರ ಶಿವಾಚಾರ್ಯರು, ಮತ್ತು ನಾಡಿನ ವಿವಿಧ ಪೀಠಗಳ ಶಿವಾಚಾರ್ಯರು ಉಪಸ್ಥಿತರಿದ್ದರು. ಮಾಜಿ ಶಾಸಕ, ದಿ : ಜಿ. ಶಿವಣ್ಣ ಅವರ ಪತ್ನಿ, ಸುನಂದಮ್ಮ ತಿಳುವಳ್ಳಿ ಕುಟುಂಬದವರಿಗೆ, ಪೀಠದ ಮಹೋನ್ನತ ಪ್ರಶಸ್ತಿ "" ಸದ್ಧರ್ಮ ಸೇವಾ ರತ್ನ "" ಪ್ರಶಸ್ತಿ ಬಿರುದು ಪ್ರಧಾನ ಮಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಫಕೀರೇಶ ಭಸ್ಮಾಂಗಿಮಠ ಅವರು ಭವ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಠದ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಉಮೇಶ ಗುಂಡಗಟ್ಟಿ, ಕಾರ್ಯದರ್ಶಿ ಅಮೃತ ಗೌಡ ಪಾಟೀಲ್, ಕೆಎಲ್ಇ ಉಪಾಧ್ಯಕ್ಷ ವ್ಹಿ. ಪಿ.ಲಿಂಗನಗೌಡ್ರ ಹಾಲೇಶಪ್ಪ ಗೌಳಿ,ಸುಮಂಗಲಾ ಪಾಟೀಲ್ , ಗುರುರಾಜ ತಿಳುವಳ್ಳಿ, ಮೃತ್ಯುಂಜಯ ಪಾಟೀಲ್, ಸೋಮನಾಥ ಹಿರೇಮಠ, ಅನಿಲ ಸಿದ್ಧಾಳಿ,ವಾಗೀಶ ಮಳಿಮಠ, ಹಾಲಸಿದ್ದಯ್ಯ ಶಾಸ್ತ್ರಿಗಳು, ಜಗದೀಶ್ ಮಳಿಮಠ, ಕೊಟ್ರೇಶ್ ಅಂಗಡಿ, ಆನಂದ ಸ್ವಾಮಿ ಹಿರೇಮಠ, ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗಣ್ಯರು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಧಾರ್ಮಿಕ ಪಾಠಶಾಲೆಯ ವಟುಗಳು ವೇದ ಘೋಷ ಮಾಡಿದರು.
ರಜನಿ ಕರಿಗಾರ್. ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ರವಿಕುಮಾರ್ ಪಾಟೀಲ್ ಸ್ವಾಗತಿಸಿದರು. ಕಸ್ತೂರಿ ಪಾಟೀಲ್ ನಿರೂಪಿಸಿ, ಫಕ್ಕಿ ರೇಶ ಭಸ್ಮಾಂಗಿ ಮಠ ವಂದಿಸಿದರು. ಸಮಾರಂಭಕ್ಕೂ ಮುನ್ನ 2 ದಿವಸಗಳ ಕಾಲ ನಡೆದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಹಿಳೆಯರು ಮತ್ತು ಭಕ್ತರು ಸಿದ್ದಲಿಂಗ ಜಗದ್ಗುರುಗಳಿಗೆ ಪಾದಪೂಜೆ ನೆರವೇರಿಸಿ ತಮ್ಮ ಗುರುಭಕ್ತಿ ನಮನ ಸಲ್ಲಿಸಿ, ಧನ್ಯತೆ ಪಡೆದರು