ಜ್ಞಾನಯೋಗಾಶ್ರಮದಲ್ಲಿ ಗುರುನಮನ ಮಹೋತ್ಸವ
ಜಮಖಂಡಿ 20: ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುನಮನ ಮಹೋತ್ಸವ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ 2024ರ ಜನವರಿ 1 ಮತ್ತು 2 ರಂದು ಜರುಗಲಿದೆ ಎಂದು ತಾಲೂಕಿನ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ತಿಳಿಸಿದ್ದಾರೆ.
ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳು ಜ್ಞಾನದ ದೀಪವನ್ನು ಬೆಳಗಿಸಿದ್ದರ ದ್ಯೋತಕವಾಗಿ ಜ.1 ರಂದು ಸಾಯಂಕಾಲ ಶ್ರೀಗಳ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ದೀಪೋತ್ಸವ ನೆರವೇರಲಿದೆ. ಶ್ರೀಗಳು ಪುಷ್ಪವನ್ನು ಬಹಳವಾಗಿ ಪ್ರೀತಿಸುತ್ತಿದ್ದುದರ ಸಂಕೇತವಾಗಿ ಜ.2 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಗಳ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಲಾಗುವುದು. ಗ್ರಾಮೀಣ ಜನರ ಬದುಕು, ಯುವಕರು ಮತ್ತು ದೇಶಪ್ರೇಮ, ಮಹಿಳೆ ಮತ್ತು ಸಂಸ್ಕೃತಿ, ಶಿಕ್ಷಣ ಹಾಗೂ ವಿಜ್ಞಾನ, ಜನಪದ ಕಲೆಗಳು, ಕ್ರೀಡೆ, ಯೋಗ, ಆರೋಗ್ಯ, ಜಾಗತಿಕ ಆಧ್ಯಾತ್ಮಿಕ ಚಿಂತನೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಮಯ ಪಾಲನೆ, ವ್ಯಸನಮುಕ್ತಿ ಇತ್ಯಾದಿ ಕುರಿತು ಗುರುನಮನ ಮಹೋತ್ಸವದ ಪೂರ್ವಭಾವಿಯಾಗಿ ಡಿ.23 ರಿಂದ ಡಿ.31 ರವರೆಗೆ ಒಂಬತ್ತು ದಿನಗಳ ಕಾಲ ಪ್ರತಿದಿನ ಸಾಯಂಕಾಲ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಶೇಷ ಚಿಂತನ ಗೋಷ್ಠಿಗಳು ನಡೆಯಲಿವೆ ಎಂದರು.
ಅದೇ ಸಂದರ್ಭದಲ್ಲಿ ಗುರುದೇವ ಗ್ರಂಥಾಲಯದ ನೂತನ ಕಟ್ಟಡದ ಉದ್ಘಾಟನೆ ನೆರವೇರಲಿದೆ. ಸಿದ್ಧೇಶ್ವರ ಶ್ರೀಗಳ ಪ್ರವಚನ ಆಧಾರಿತ ಕನ್ನಡ ಮತ್ತು ಹಿಂದಿ ಗ್ರಂಥಗಳ ಲೋಕಾರೆ್ಣ ಮಾಡಲಾಗುವುದು. ಸಿದ್ಧೇಶ್ವರ ಶ್ರೀಗಳ ವಿಶೇಷ ಭಾವಚಿತ್ರಗಳ (ಫೋಟೊ ಗ್ಯಾಲರಿ) ಪ್ರದರ್ಶನ ನಡೆಯಲಿದೆ. ಗುರುನಮನ ಮಹೋತ್ಸವದಲ್ಲಿ ಯಾವುದೇ ರೀತಿಯ ಆಡಂಬರ ಇರುವುದಿಲ್ಲ. ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮಗಳು ಜರುಗಲಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನೇಕ ಮಂತ್ರಿಗಳು, ನಾಡಿನ ಅನೇಕ ಪೂಜ್ಯರು, ಗಣ್ಯರು ಸೇರಿದಂತೆ ಅಂದಾಜು 4 ರಿಂದ 5 ಲಕ್ಷ ಸಕಲ ಸದ್ಭಕ್ತರು ಬಂದು ಹೋಗುವ ನೀರೀಕ್ಷೆಯಿದೆ. ಭಕ್ತಾದಿಗಳು ತಮಗೆ ಅನುಕೂಲ ಆಗುವ ದಿನಗಳಂದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಬಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸಿದ್ಧೇಶ್ವರ ಶ್ರೀಗಳ ಭಾವಚಿತ್ರ ಖರೀದಿಸಿ ಮನೆಯಲ್ಲಿಟ್ಟು ಪ್ರತಿನಿತ್ಯ ಪೂಜೆ ಸಲ್ಲಿಸಬೇಕು. ಶ್ರೀಗಳು ಬರೆದಿರುವ ಎರಡು ಪುಸ್ತಕಗಳನ್ನು ಖರೀದಿಸಬೇಕು ಎಂದು ಸಮಗ್ರ ಮಾಹಿತಿ ನೀಡಿದ್ದಾರೆ.