ಗುಳೇಗುಡ್ಡ

ಗುಳೇದಗುಡ್ಡ: ಆಮೆವೇಗದಲ್ಲಿ ಹೆದ್ದಾರಿ ಕಾಮಗಾರಿ

ಗುಳೇದಗುಡ್ಡ: ಆಮೆವೇಗದಲ್ಲಿ ಹೆದ್ದಾರಿ ಕಾಮಗಾರಿ
ಗುಳೇಗುಡ್ಡದಲ್ಲಿ ಸ್ಥಗಿತವಾಗಿರುವ ಸಂಗಮ-ಸಂಕೇಶ್ವರ ಹೆದ್ದಾರಿ ಕಾಮಗಾರಿ.

ಗುಳೇದಗುಡ್ಡ 11: ಪಟ್ಟಣದಲ್ಲಿ ಕಳೆದ ವರ್ಷ ಆರಂಭವಾಗಿರುವ ಸಂಗಮ-ಸಂಕೇಶ್ವರ ರಸ್ತೆ ಕಾಮಗಾರಿ ಪಟ್ಟಣದ ಹೆಸ್ಕಾಂ ಕಚೇರಿ ಎದುರುಗಡೆ ಕಳೆದ 6 ತಿಂಗಳಿಂದ ಸ್ಥಗಿತವಾಗಿದೆ. ಖಾಸಗಿ ದೂರಿನ ಕಾರಣ ಪಟ್ಟಣದಲ್ಲಿ ಅಭಿವೃದ್ಧಿ ಯೋಜನೆ ನೆನಗುದಿಗೆ ಬಿದ್ದು ನಿತ್ಯ ಹತ್ತಾರು ಆತಂಕಗಳು ಅಲ್ಲಿ ಜರುಗುತ್ತಿವೆ. ಸಂಚಾರಕ್ಕೆ ಅಡತಡೆಯಾಗಿ ನಿತ್ಯ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ. ರಾಜಕೀಯ ಇಬ್ಬಗೆ ನೀತಿಯಿಂದ ಅಧಿಕಾರಿಗಳು ಅಭಿವೃದ್ಧಿ ಯೋಜನೆಗೆ ಹಿಂದೇಟು ಹಾಕುವಂತಾಗಿ, ರಾಜ್ಯ ಹೆದ್ದಾರಿಗೆ  ಕತ್ತರಿ ಬಿದ್ದಂತಾಗಿದೆ.  

ಕೆಲದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಉಪವಿಭಾಗಾಧಿಕಾರಿಗಳಿಗೆ ಸಮಸ್ಯೆ ತಿಳಿಗೊಳಿಸಿ ರಸ್ತೆ ಕಾಮಗಾರಿ ಆರಂಭಿಸುವಂತೆ ಸಲಹೆ ನೀಡಿದ್ದಾರೆ. ಉಪವಿಭಾಗಾಧಿಕಾರಿಗಳು ಪಟ್ಟಣಕ್ಕೆ ಹಲವು ಬಾರಿ ಬಂದು ಹೋಗಿದ್ದರೂ ಸಮಸ್ಯೆ ಬಗೆಹರಿಸದೇ ಮೃದು ಧೋರಣೆ ತೋರುತ್ತಿದ್ದಾರೆ. ಅಧಿಕಾರಿಗಳು ಮೀನಾವೇಶ ಮಾಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. 

ಪಟ್ಟಣದಲ್ಲಿ ಖಾಸಗಿ ದೂರುಗಳು ಬಂದರೆ ಸಾಕು ಆ ಸ್ಥಳದಲ್ಲಿ ಕಾಮಗಾರಿ ನಿಲ್ಲಿಸಿ ಮುಂದೆ ಮಾಡಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಪಟ್ಟಣದ ಪ್ರಮುಖ ರಸ್ತೆಯನ್ನೇ ಲೋಕೋಪಯೋಗಿ ಇಲಾಖೆ ಹಾಳುಗೆಡವಿದೆ. ಗುತ್ತಿಗೆದಾರರಿಗೆ ಕೇಳಿದರೆ, ಅವರು ಲೋಕೋಪಯೋಗಿ ಇಲಾಖೆಯವರು ಹೇಳಿದರೆ ಮಾಡುತ್ತೇವೆ. ಅದು ನಮಗೆ ಸಂಬಂಧಿಸಿದ್ದಲ್ಲ ಎಂದು ಗುತ್ತಿಗೆದಾರರು  ಹೇಳುತ್ತಿದ್ದಾರೆ. 

ಅಧಿಕಾರಿಗಳ ಈ ನೀತಿ ರಸ್ತೆ ಕಾಮಗಾರಿಗೆ ಮಾರಕವಾಗಿದೆ. ಜಿಲ್ಲಧಿಕಾರಿಗಳು ಮುತುವರ್ಜಿವಹಿಸಿ ಸಂಕೇಶ್ವರ-ಸಂಗಮ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಸಾಂಸ್ಕೃತಿಕ ಪರಂಪರೆ ಹೊಂದಿದ ಗುಳೇದಗುಡ್ಡ ಪಟ್ಟಣದ ಅಭಿವೃದ್ಧಿ ಕಾರ್ಯಗಳು ಮಾತ್ರ ಆಮೆಗತಿಯಲ್ಲಿವೆ. ಕೆಲವು ಕಾಮಗಾರಿಗಳಂತೂ ಸಂಪೂರ್ಣವಾಗದೇ ನೆನಗುದಿಯಿಂದ ಹಾಳಾಗಿವೆ. ಇವುಗಳ ಪುನಶ್ಚೇತನಕ್ಕೆ ಶಾಸಕರು ಇಚ್ಚಾಶಕ್ತಿ ತೋರುವರಾ ಎಂಬ ಪ್ರಶ್ನೆ ಈ ಭಾಗದ ಜನರಲ್ಲಿ ಕಾಡುತ್ತಿದೆ.  

ಸುದ್ದಿ ಓದಿ