ಮಹಾನ್ ವ್ಯಕ್ತಿಗಳು ನಮಗೆ ಆದರ್ಶರಾಗಿರಬೇಕು: ಡಾ. ಸೂರಜ್ ಜೈನ್
ಧಾರವಾಡ 27: ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ ನಮ್ಮೆಲ್ಲರಿಗೆ ಸ್ಪೂರ್ತಿಯಾಗಬೇಕು. ಮತ್ತು ಅವರ ಸತ್ಯ, ಅಹಿಂಸಾ ಸಿದ್ಧಾಂತಗಳನ್ನು ಪ್ರಪಂಚವೇ ಅರಿತುಕೊಂಡು ಅಕ್ಟೊಬರ್ 2ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಇಂತಹ ಮಹಾನ್ ವ್ಯಕ್ತಿಗಳು ನಮಗೆ ಆದರ್ಶರಾಗಿರಬೇಕು. ಮಹಾತ್ಮ ಗಾಂಧೀಜಿ ಅವರ ಮೌಲ್ಯ ಮತ್ತು ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜೆ.ಎಸ್.ಎಸ್. ಎಸ್.ಎಮ್.ಐ. ಕಾಲೇಜಿನ ಉಪಪ್ರಾಚಾರ್ಯ ಡಾ. ಸೂರಜ್ ಜೈನ್ ಹೇಳಿದರು.
ಇಲ್ಲಿನ ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಧಾರವಾಡದ ಪ್ರಾದೇಶಿಕ ಪತ್ರಗಾರ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಾತ್ಮಾಗಾಂಧೀಜಿಯವರ ಭಾವಚಿತ್ರಗಳು ಮತ್ತು ದಾಖಲೆಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡದ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಮಂಜುಳಾ ಯಲಿಗಾರ ಮಾತನಾಡಿ ಇತಿಹಾಸ ತಿಳಿದುಕೊಳ್ಳಲು ದಾಖಲೆಗಳ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಧಾರವಾಡ ಪತ್ರಗಾರ ಇಲಾಖೆಯಲ್ಲಿರುವ ಕಿತ್ತೂರು, ಕಲಕೇರಿ ಮುಂತಾದ ಸಂಸ್ಥಾನಗಳ ದಾಖಲೆಗಳ ಬಗ್ಗೆ ಪರಿಚಯ ನೀಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಅಥವಾ ಬಂಧು-ಬಳಗದವರಲ್ಲಿ, ಸ್ನೇಹಿತರಲ್ಲಿ ಇಂತಹ ದಾಖಲೆಗಳು ಕಂಡಲ್ಲಿ ಇಲಾಖೆಗೆ ಅವುಗಳನ್ನು ಸಂರಕ್ಷಿಸಲು ನೀಡಬೇಕೆಂದು ಕೋರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ವರ್ಷದಿಂದ ಒಂದು ವರ್ಷದ ಮೋಡಿ ಲಿಪಿ ಅಧ್ಯಯನದ ಡಿಪ್ಲೊಮಾ ಕೋರ್ಸ ಪ್ರಾರಂಭಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬಹುದು ಎಂದರು.
ವಿಶೇಷ ಉಪನ್ಯಾಸ ನೀಡಿದ ಗೋವಾದ ಇಂಡೊ ಪೊರ್ಚುಗಿಸ್ ಸಾಹಿತ್ಯ ವೇದಿಕೆಯ ನಿರ್ದೇಶಕ ಡಾ. ಅರವಿಂದ ಯಾಳಗಿ ಮಾತನಾಡಿ ವಿದೇಶದಲ್ಲಿರುವ ವಸ್ತು ಸಂಗ್ರಹಾಲಯಗಳು ಮತ್ತು ಪತ್ರಗಾರ ಇಲಾಖೆಯಲ್ಲಿ ಕನ್ನಡದ ದಾಖಲೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಬೋಧಿಸಿದರು. ಲಂಡನ್, ಮಾಸ್ಕೋ, ಪ್ಯಾರಿಸ್, ಲಿಸ್ ಬನ್, ಜೋಹಾನ್ಸ ಬರ್ಗ ಮುಂತಾದ ದೇಶಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಉಲ್ಲಾಳದ ಅಬ್ಬಕ್ಕ, ರಾಣಿ ಚೆನ್ನಭೈರಾದೇವಿ, ಕೆಳದಿ ಚೆನ್ನಮ್ಮ, ಮುಂತಾದ ಕರ್ನಾಟಕದ ರಾಣಿಯರ ದಾಖಲೆಗಳನ್ನು ನೋಡಬಹುದಾಗಿದೆ. ಅಲ್ಲದೇ ಟಿಪು ಸುಲ್ತಾನ್, ಹೈದರಾಲಿ ಇವರುಗಳ ದಾಖಲೆಗಳನ್ನು ಸಹ ನೋಡಬಹುದು. ಹೊರ ದೇಶದ ವಿಶ್ವವಿದ್ಯಾಲಯಗಳು, ವಸ್ತು ಸಂಗ್ರಹಾಲಯಗಳು, ಪತ್ರಗಾರ ಇಲಾಖೆಯಲ್ಲಿರುವ ಕರ್ನಾಟಕದ ದಾಖಲೆಗಳ ಬಗ್ಗೆ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹೊಂದುವಂತಾಗಬೇಕೆಂದು ಕರೆನೀಡಿದರು.
ಡಾ. ಕೆ.ಎಚ್.ನಾಗಚಂದ್ರ, ಮಹಾವೀರ ಉಪಾಧ್ಯೆ, ಡಾ. ಆರ್.ವಿ.ಚಿಟಗುಪ್ಪಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿಂಚನಾ ಭಟ್ ಪ್ರಾರ್ಥಿಸಿದರು. ಪ್ರೊ. ಮಹಾಂತ ಎಂ.ದೇಸಾಯಿ ನಿರೂಪಿಸಿದರು, ಪ್ರೊ. ಚೇತನಾ ಕೋರಿಶೆಟ್ಟರ ಸ್ವಾಗತಿಸಿದರು, ಪ್ರೊ. ವಾಣಿಶ್ರೀ ಕುಲಕರ್ಣಿ ವಂದಿಸಿದರು.