ಬೆಳಗಾವಿ

ಏಷ್ಯನ್ ಪ್ಯಾರಾ ಗೇಮ್ಸ್‌ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ

ಏಷ್ಯನ್ ಪ್ಯಾರಾ ಗೇಮ್ಸ್‌ ಕಂಚಿನ ಪದಕ ವಿಜೇತ ಸ್ವಾತಿಕ್ ಪಾಟೀಲಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ


            ಬೆಳಗಾವಿ 28 :  ಜಪಾನ್ನಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್ನ ಪುರುಷರ 100 ಮೀಟರ್ ಬ್ರೆಸ್ಟ್ಸ್ಟ್ರಕ್ ಖಃ9 ಈಜು ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಹೆಮ್ಮೆಯ ಕ್ರೀಡಾಪಟು ಸ್ವಾತಿಕ್ ಪಾಟೀಲ ಅವರಿಗೆ ಬುಧವಾರ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ ನೀಡಿ ಗೌರವಿಸಲಾಯಿತು.

               ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಅಸಾಧಾರಣ ಪ್ರತಿಭೆ, ಕಠಿಣ ಪರಿಶ್ರಮ, ಛಲ ಹಾಗೂ ಆತ್ಮವಿಶ್ವಾಸದ ಮೂಲಕ ಪದಕ ಗೆದ್ದು ಭಾರತದ ತ್ರಿವರ್ಣ ಧ್ವಜವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಸ್ವಾತಿಕ್ ಪಾಟೀಲ ಅವರು ಇಂದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

         ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಲಾಯಿತು.ಸಾಧಕನಿಗೆ ಆತ್ಮೀಯ ಸ್ವಾಗತಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷ ಬಸವರಾಜ ಶೇಗಾಂವಿ, ಕಾಂಗ್ರೆಸ್ ಮುಖಂಡ ನಾಗೇಶ್ ದೇಸಾಯಿ ಸೇರಿದಂತೆ ಮುತಗಾ ಗ್ರಾಮದ ಮುಖಂಡರು, ಊರಿನ ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು.

             ತಮ್ಮೂರಿನ ಪ್ರತಿಭಾವಂತ ಕ್ರೀಡಾಪಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತವರಿಗೆ ಮರಳಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಸಂಭ್ರಮ ಮನೆಮಾಡಿತ್ತು. ನೆಚ್ಚಿನ ಕ್ರೀಡಾಪಟುವನ್ನು ಕಂಡ ಜನರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು. ಹಿರಿಯರು ಸ್ವಾತಿಕ್ ಅವರನ್ನು ಆಶೀರ್ವದಿಸಿದರೆ, ಯುವಕರು ಹಾಗೂ ಮಹಿಳೆಯರು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ಕ್ರೀಡಾ ಬದುಕಿಗೆ ಶುಭ ಹಾರೈಸಿದರು. ತೆರೆದ ವಾಹನದಲ್ಲಿ ಮೆರವಣಿಗೆವಿಮಾನ ನಿಲ್ದಾಣದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಸ್ವಾತಿಕ್ ಪಾಟೀಲ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಯಿತು.

               ಮೆರವಣಿಗೆಯಲ್ಲಿ ಅಭಿಮಾನಿಗಳು, ಗ್ರಾಮಸ್ಥರು ಹಾಗೂ ಯುವಕರು ಪಾಲ್ಗೊಂಡು ತಮ್ಮೂರಿನ ಕ್ರೀಡಾ ಸಾಧಕನಿಗೆ ಗೌರವ ಸಮರ​‍್ಿಸಿದರು. ಸ್ವಾತಿಕ್ ಅವರ ಸಾಧನೆಯನ್ನು ಸಂಭ್ರಮಿಸುವ ಮೂಲಕ ಮುತಗಾ ಗ್ರಾಮದ ಜನರು ತಮ್ಮ ಪ್ರೀತಿ, ಅಭಿಮಾನ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು.ನಾಡಿನ ಯುವಜನತೆಗೆ ಸ್ಫೂರ್ತಿಯಾದ ಸಾಧನೆಸ್ವಾತಿಕ್ ಪಾಟೀಲ ಅವರ ಈ ಸಾಧನೆ ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವಂತಹದ್ದಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರತಿಭೆಯ ಜತೆಗೆ ನಿರಂತರ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಎಷ್ಟು ಮುಖ್ಯ ಎಂಬುದಕ್ಕೆ ಸ್ವಾತಿಕ್ ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ.

                ವಿಶೇಷ ಚೇತನ ಕ್ರೀಡಾಪಟುಗಳ ಸಾಮರ್ಥ್ಯ, ಪ್ರತಿಭೆ ಹಾಗೂ ಸಾಧನೆಯ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ಯಾರಾ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಸ್ವಾತಿಕ್ ಅವರಂತಹ ಕ್ರೀಡಾಪಟುಗಳ ಸಾಧನೆ ಅನೇಕ ಯುವಕರಿಗೆ ಹೊಸ ಭರವಸೆ ಮತ್ತು ಪ್ರೇರಣೆ ನೀಡಲಿದೆ.ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಹೆಮ್ಮೆ ತಂದಿರುವ ಸ್ವಾತಿಕ್ ಪಾಟೀಲ ಅವರು ಮುಂಬರುವ ದಿನಗಳಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿ, ದೇಶದ ಪರವಾಗಿ ಮತ್ತಷ್ಟು ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು. 


ಸುದ್ದಿ ಓದಿ