ಬೆಳಗಾವಿ

ಕೆಎಲ್‌ಇಯಲ್ಲಿ ‘ದೀಪೋತ್ಸವ 2026’ ಸಂಭ್ರಮ

ಕೆಎಲ್‌ಇಯಲ್ಲಿ ‘ದೀಪೋತ್ಸವ 2026’ ಸಂಭ್ರಮ

ಲೋಕದರ್ಶನ ವರದಿ 


           ಬೆಳಗಾವಿ 28 : ಮಹಿಳೆಯರ ಸೃಜನಶೀಲತೆ, ಪ್ರತಿಭೆ ಹಾಗೂ ಕಲಾತ್ಮಕ ಕೌಶಲಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಆಯೋಜಿಸಿದ್ದ ‘ದೀಪೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷೆ ಆಶಾ ತಾಯಿ ಕೋರೆ ಉದ್ಘಾಟಿಸಿದರು. ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ಅ. 27 ಮತ್ತು 28ರಂದು ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು.  

            ಕೆಎಲ್‌ಇ ಸಂಸ್ಥೆಯ ಮಹಿಳಾ ಉದ್ಯೋಗಿಗಳಲ್ಲಿನ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಉತ್ಸವದಲ್ಲಿ ಮಹಿಳೆಯರು, ಸ್ಥಳೀಯ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಂಗೋಲಿ, ಅಡುಗೆ ಸ್ಪರ್ಧೆ, ಮರದ ಅಲಂಕಾರ, ಟೆರಾಕೋಟಾ ಪೇಂಟಿಂಗ್, ಮೇಣದಬತ್ತಿ ತಯಾರಿಕೆ, ಮೆಹಂದಿ ಹಾಗೂ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳು ಉತ್ಸವಕ್ಕೆ ಮೆರುಗು ನೀಡಿದವು. 1,100ಕ್ಕೂ ಹೆಚ್ಚು ಮಹಿಳೆಯರು ಉತ್ಸವದಲ್ಲಿ ಭಾಗವಹಿಸಿದ್ದರು.  

                ಸ್ಥಳೀಯ ಉದ್ಯಮಶೀಲತೆಗೆ ಉತ್ತೇಜನ  

‘ವೋಕಲ್ ಫಾರ್ ಲೋಕಲ್‌’ ಆಶಯಕ್ಕೆ ಒತ್ತು ನೀಡಿದ ದೀಪೋತ್ಸವದಲ್ಲಿ ಸುಮಾರು 100 ಸ್ಥಳೀಯ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು. ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹಬ್ಬಕ್ಕೆ ಅಗತ್ಯವಾದ ವಸ್ತುಗಳು, ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳು, ಕಲಾತ್ಮಕ ವಸ್ತುಗಳು ಹಾಗೂ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಮಳಿಗೆಗಳು ಗಮನ ಸೆಳೆದವು.  

                 ಮಹಿಳೆಯರ ಪ್ರತಿಭೆಯನ್ನು ಗುರುತಿಸುವುದು, ಉದ್ಯಮಶೀಲತೆಯನ್ನು ಬೆಳೆಸುವುದು, ಸಹೋದ್ಯೋಗಿಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಹಾಗೂ ಏಕತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವುದು ದೀಪೋತ್ಸವದ ಪ್ರಮುಖ ಉದ್ದೇಶವಾಗಿತ್ತು. ಮಹಿಳೆಯರು ತಮ್ಮ ಕಲಾತ್ಮಕ ಪ್ರತಿಭೆ, ಪಾಕಕೌಶಲ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಉತ್ಸವ ಉತ್ತಮ ವೇದಿಕೆಯಾಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಸಂಯೋಜಕರಾದ ಡಾ. ಪ್ರೀತಿ ದೊಡವಾಡ, ಕಾರ್ಯದರ್ಶಿ ಡಾ. ನೇಹಾ ದಡೇದ್, ಡಾ. ರೇಣುಕಾ ಮೆಟಗುಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ