ಮಹಿಳಾ ಕಾಯಕೋತ್ಸವ ಹೊಸ ಅಭಿಯಾನಕ್ಕೆ ಸರ್ಕಾರ ಅಣಿ
ಡಾ.ಪುನೀತ್ ಬಿ.ಆರ್. ಹೇಳಿಕೆ: 15ರಿಂದ ಬಾದಾಮಿ ತಾಲೂಕಿನಲ್ಲಿ ಆರಂಭ
ಗುಳೇದಗುಡ್ಡ 6: ಗ್ರಾಮೀಣ ಜನರ ಬದುಕಿನ ಭರವಸೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸದಾ ಒಂದಿಲ್ಲೊಂದು ವಿನೂತನ, ವೈಶಿಷ್ಟ್ಯ ಕಾರ್ಯಕ್ರಮಗಳಿಂದ ಜನರಿಗೆ ಅಪ್ಯಾಯಮಾನವಾಗಿದೆ. ಈಗ ಹೊಸ ಅಭಿಯಾನಕ್ಕೆ ಸರ್ಕಾರ ಅಣಿಯಾಗಿದೆ ಎಂದು ಬಾದಾಮಿ ತಾಪಂ ಇಓ ಡಾ.ಪುನೀತ್ ಬಿ.ಆರ್.ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲ ಮಹಿಳಾ ಸಬಲೀಕರಣ ಪರಿಕಲ್ಪನೆ ದೃಷ್ಟಿಯಲ್ಲಿರಿಸಿಕೊಂಡು ಮಹಿಳಾ ಕಾಯಕೋತ್ಸವ ಅಭಿಯಾನವನ್ನು ಬಾದಾಮಿ ತಾಲೂಕಿನಲ್ಲಿ ಆರಂಭಿಸಿದೆ. ಮಹಿಳಾ ಕಾಯಕೋತ್ಸವ ಮುಖೇನ ನರೇಗಾದ ಅಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ವೃದ್ಧಿಸುವುದಾಗಿದೆ.
ಜ.15 ರಿಂದ ಮಾ.15 ರವರೆಗೆ 2 ತಿಂಗಳ ಕಾಲ ಎರಡು ಹಂತದಲ್ಲಿ ಅಭಿಯಾನ ಹಮ್ಮಿಕೊಂಡಿದೆ. ಮೊದಲ ಹಂತದಲ್ಲಿ ತಾಲೂಕಿನಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕಡಿಮೆ ಇರುವ 4 ಗ್ರಾಪಂಗಳಲ್ಲಿ ಎರಡನೇ ಹಂತದಲ್ಲಿ 6 ಗ್ರಾಪಂಗಳಲ್ಲಿ ಅಭಿಯಾನ ಆರಂಭವಾಗಲಿದೆ. ಈಗಾಗಲೇ ಮೊದಲ ಹಂತದಲ್ಲಿ ಅಭಿಯಾನ ಆರಂಭವಾಗಿದ್ದು, ಮಹಿಳಾ ಕಾಯಕೋತ್ಸವ ಅನುಷ್ಠಾನಕ್ಕಾಗಿ ತಾಪಂ ಇಒ ಹಾಗೂ ತಾಪಂ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ 2 ತಂಡ ರಚಿಸಲಾಗಿದೆ. ತಾಲೂಕ ಐ.ಇ.ಸಿ. ಸಂಯೋಜಕರು, ಸಾಮಾಜಿಕ ಪರಿಶೋಧನೆ ಸಂಯೋಜಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಕಾಯಕ ಬಂಧುಗಳು, ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮದ ಪ್ರತಿ ಮನೆಗೂ ತೆರೆಳಿ ಮಹಿಳೆಯರ ಸಮೀಕ್ಷೆ ಮಾಡಿ, ಮಹಿಳಾ ಕುಟುಂಬಗಳನ್ನು ಗುರ್ತಿಸುವುದು, ಉದ್ಯೋಗ ಚೀಟಿ ರಹಿತರಿಗೆ ಉದ್ಯೋಗ ಚೀಟಿ ನೀಡುವುದು. ಉದ್ಯೋಗ ಚೀಟಿ ಹೊಂದಿದ ಮಹಿಳೆಯರಿಂದ ಕೆಲಸದ ಬೇಡಿಕೆ ಪಡೆಯುವುದು. ಜೊತೆಗೆ ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯಾಗಿಸುವುದು. ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ನರೇಗಾಯಡಿ ಗಂಡು ಹೆಣ್ಣು ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಕೂಲಿಯನ್ನು ನೀಡಲಾಗುತ್ತದೆ. ಮಹಿಳಾ ಕಾಯಕೋತ್ಸವದ ಮುಖೇನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನ ಭಾಗವಹಿಸುವಂತೆ ಮಾಡಲಾಗುತ್ತಿದೆ.
ಡಾ. ಪುನೀತ ಬಿ.ಆರ್. ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಬಾದಾಮಿ.
ಮಹಿಳಾ ಕಾಯಕೋತ್ಸವದ ಮುಖೇನ ಮಹಿಳೆಯರಿಗೆ ನರೇಗಾದಡಿ ಉದ್ಯೋಗವನ್ನು ದೊರಕಿಸಿ ಕೊಡುವುದರ ಜೊತೆಗೆ ಆರ್ಥಿಕವಾಗಿ ನೆರವಾಗಿದೆ. ಮಹಿಳೆಯರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಬೇಡಿಕೆಗೆ ಅನುಗುಣವಾಗಿ ಕೆಲಸವನ್ನು ನೀಡಲಾಗುತ್ತಿದೆ.
- ಸಂತೋಷ ಕುರಿ ಸಹಾಯಕ ನಿರ್ದೇಶಕರು ತಾ.ಪಂ ಬಾದಾಮಿ.
• ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಅಭಿಯಾನದ ಕುರಿತು ತಿಳುವಳಿಕೆ ನೀಡಲಾಗುತ್ತಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿ ಮಹಿಳೆಯರಿಗೆ ನರೇಗಾ ಬಗ್ಗೆ ತಿಳುವಳಿಕೆ ನೀಡಿ ಕೆಲಸದಲ್ಲಿ ಭಾಗವಹಿಸುವಂತೆ ಪ್ರೇರೆಪಿಸಲಾಗುತ್ತಿದ್ದು ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ.
• - ಸಮೀರ ಉಮರ್ಜಿ ತಾಲೂಕ ಐ.ಇ.ಸಿ. ಸಂಯೋಜಕರು ತಾ.ಪಂ. ಬಾದಾಮಿ.