ಸರಕಾರಿ ನೌಕರರು ಮೊದಲು ಒಗ್ಗಟ್ಟಾಗಬೇಕು: ಧೈವಾಡಿ
ಇಂಡಿ26; ಸರಕಾರಿ ನೌಕರರು ಮೊದಲು ಒಗ್ಗಟ್ಟಾಗಬೇಕು. ನಾವೆಲ್ಲ ಒಗ್ಗಟ್ಟಾದಾಗ ಮಾತ್ರ ನಮ್ಮ ಬೇಡಿಕೆ ಈಡೇರುತ್ತವೆ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಹಬಾಳ್ವೆ ಇದ್ದಾಗ ಮಾತ್ರ ಸಂಘಟನೆ ಸದೃಢವಾಗಿರುತ್ತದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಧೈವಾಡಿ ಹೇಳಿದರು.
ಅವರು ಶನಿವಾರ ಪಟ್ಟಣದ ನೌಕರರ ಸಭಾಭವನದಲ್ಲಿ ಸರಕಾರಿ ನೌಕರ ಸಂಘದ ಇಂಡಿ ಶಾಖೆಯ ನೂತನ ಅಧ್ಯಕ್ಷ ಎಸ್.ಡಿ. ಪಾಟೀಲ ಅವರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಘಟನೆ ಮಾಡುವಾಗ ಹಲವು ಕಷ್ಟಗಳು ಬರುತ್ತವೆ. ಏಳ್ಗೆ ಸಹಿಸದ ಹಲವು ದುಷ್ಟ ಶಕ್ತಿಗಳು ಏನಾದರೊಂದು ಮಾಡುತ್ತಿರುತ್ತಾರೆ. ಅವುಗಳನ್ನೆಲ್ಲ ಭೇಧಿಸಿ ಸಾಧನೆಯ ಹಾದಿ ಹಿಡಿದು ಸಾಹಸಿಯಾಗಬೇಕು ಎಂದರು.
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ ಪ್ರಾಮಾಣಿಕತೆಯಿಂದ ನಮ್ಮ ಕೆಲಸ ನಾವು ಮಾಡಬೇಕು. ಯಾವುದೇ ಧ್ವಂದ್ವ ನಿಲುವುಗಳಿಗೆ ಒಳಪಡದೆ ನೌಕರರ ಏಳ್ಗೆಗೆ ಶ್ರಮಿಸಬೇಕು. ನಾನು ಕಳೆದ 25 ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಕೊಂಡು ಕಾರ್ಯ ಮಾಡುತ್ತ ಬಂದಿದ್ದೇನೆ. ನನ್ನ ಪ್ರಾಮಾಣಿಕತೆಗೆ ನೀವೆಲ್ಲ ಪ್ರೀತಿಯಿಂದ ಹಾರೈಸಿ ಮುನ್ನಡೆಸುತ್ತಿದ್ದೀರಿ, ಹೀಗಾಗಿ ಸದಾಕಾಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
ಇಂಡಿ ನೌಕರರ ಸಂಘದ ಪದಾಧಿಕಾರಿಗಳು ಉತ್ತಮ ಕಾರ್ಯ ಮಾಡಿದ್ದರ ಪ್ರಯುಕ್ತ ನೌಕರರ ಭವನ ನಿರ್ಮಾಣವಾಗಿದೆ. ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ತಂಡದ ಕಾರ್ಯಕ್ಕೆ ಅಭಿನಂದಿಸುವೆ. ಈಗ ಅಧಿಕಾರ ಸ್ವೀಕರಿಸಿದ ಎಸ್.ಡಿ. ಪಾಟೀಲರು ಸಹ ಕ್ರಿಯಾಶೀಲರಾಗಿದ್ದು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ, ಎನ್ಪಿಎಸ್ ರದ್ಧತಿ ಹಾಗೂ ಕೇಂದ್ರ ಮಾದರಿ ವೇತನ, ಪದವೀಧರ ಶಿಕ್ಷಕರ ಸಮಸ್ಯೆಗಳ ಬಗ್ಗೆ ಎರಡು ದಿನಗಳ ಹಿಂದೆ ರಾಜ್ಯಾಧ್ಯಕ್ಷರಾದ ಷಡಕ್ಷರಿ ಹಾಗೂ ನಾವೆಲ್ಲ ಹೋಗಿ ಮುಖ್ಯಮಂತ್ರಿಗಳಿಗೆ ಎಲ್ಲ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿಕೊಂಡಿದ್ದು, ಬಜೆಟ್ನಲ್ಲಿ ಬಹುತೇಕ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಪಾಟೀಲ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ, ಪದಗ್ರಹಣ ಸ್ವೀಕರಿಸಿದ ಎಸ್.ಡಿ. ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೌಕರರ ಸಂಘದ ಠರಾವು ಪುಸ್ತಕವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ
ಬಿ.ಎಂ. ಅಂಜುಟಗಿ, ಸೈಯದ್ಜುಬೇರ್ ಕೆರೂರ, ಅಶೋಕ ತೆಲ್ಲೂರ, ರವೀಂದ್ರ ಹೂಗಾರ, ಬಿ.ಕೆ.ಗೋಟ್ಯಾಳ, ಎನ್.ಜಿ. ರೊಳ್ಳಿ, ಆರ್.ಎಂ. ಮೇತ್ರಿ, ಆರ್.ಕೆ.ದುದಗಿ, ನೀಲಾ ಇಂಗಳೆ, ಎಂ.ಸಿ. ಗಿರಣಿವಡ್ಡರ್, ಬಸವರಾಜ ಗೊರನಾಳ, ಆರ್.ವಿ. ಪಾಟೀಲ, ಆಂಜನೇಯ ಹೊಸಮನಿ, ಸೇರಿದಂತೆ ಮತ್ತಿತರರು ಇದ್ದರು.
ಬಸವರಾಜ ಗೊರನಾಳ ಸ್ವಾಗತಿಸಿದರು, ಎಸ್.ಎನ್. ಕೋಳಿ ನಿರೂಪಿಸಿದರು, ಆರ್.ವಿ. ಪಾಟೀಲ ವಂದಿಸಿದರು.