ಕುಷ್ಟಗಿ

ದೇಶದ ಸಮಗ್ರತೆ, ಐಕ್ಯತೆಯನ್ನು ಕಾಪಾಡುವುದು ಸರ್ಕಾರಗಳ ಆದ್ಯ ಕರ್ತವ್ಯ: ಗೋಪಿನಾಥ್

ದೇಶದ ಸಮಗ್ರತೆ, ಐಕ್ಯತೆಯನ್ನು ಕಾಪಾಡುವುದು ಸರ್ಕಾರಗಳ ಆದ್ಯ ಕರ್ತವ್ಯ: ಗೋಪಿನಾಥ್

ಲೋಕದರ್ಶನ ವರದಿ  

ಕುಷ್ಟಗಿ 13:  ಪ್ರತಿಯೊಬ್ಬ ಭಾರತೀಯ ಪ್ರಜೆಯ ಆತ್ಮಗೌರವವನ್ನು ಸಂರಕ್ಷಿಸುವುದರ ಮೂಲಕ ದೇಶದ  

ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಗೋಪಿನಾಥ್ ಹೇಳಿದರು.  


ಬಹುಜನ ಸಮಾಜ ಪಾರ್ಟಿ ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯವ್ಯಾಪಿ ಜೈಭೀಮ್ ಜನಜಾಗೃತಿ ಜಾಥಾವು ಗುರುವಾರ ಬೆಳಿಗ್ಗೆ ಕುಷ್ಟಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಏರಿ​‍್ಡಸಿದ್ದ ಸಮಾವೇಶದ ನೇತೃತ್ವ ವಹಿಸಿ ಮಾತನಾಡಿದ ಅವರು ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ  ಸಂವಿಧಾನವು ಜನವರಿ 26, 1950 ರಂದು ಕಾರ್ಯರೂಪಕ್ಕೆ ಬಂದಿದೆ. ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ವಿಮೋಚನೆಯನ್ನು ಸ್ಥಾಪಿಸುವ ಸಲುವಾಗಿ ನಮ್ಮ ಸಂವಿಧಾನವು ಕಾನೂನಿನ ಮುಂದೆ ಎಲ್ಲರೂ ಸಮಾನರು, ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಲಾಗಿದೆ, ಮತ್ತು ಜಾತಿ, ಧರ್ಮ, ಕೋಮು, ಭಾಷೆ, ಹುಟ್ಟಿದ ಸ್ಥಳ ಮತ್ತು ಲಿಂಗಭೇದಗಳನ್ನು ಆಧರಿಸಿದ ತಾರತಮ್ಯವನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.  


ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲಾ ಸೇವೆಗಳಲ್ಲಿ, ಹಿಂದುಳಿದ ವರ್ಗಗಳಿಗೆ (ಎಸ್‌.ಸಿ., ಎಸ್‌.ಟಿ. ಮತ್ತು ಓ. ಬಿ. ಸಿ.ಗಳು) ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯವನ್ನು ನೀಡುವ ಸಲುವಾಗಿ ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ. ಪುರುಷರು ಮತ್ತು ಮಹಿಳೆಯರಿಬ್ಬರೂ ಸಮಾನವಾದ ಸಾಮಾಜಿಕ ಸ್ಥಾನಮಾನ, ಅಂತಸ್ತು, ಗೌರವ ಹಾಗೂ ಆರ್ಥಿಕ ಅವಕಾಶಗಳನ್ನು ಪಡೆದಿದ್ದಾರೆ  

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ಹಾಗೂ ಎಸ್‌.ಸಿ./  ಎಸ್‌.ಟಿ.ಗಳ ಅಭಿವೃದ್ಧಿಗಾಗಿ ಸರ್ಕಾರಗಳು ವಿಶೇಷ ಯೋಜನೆಗಳನ್ನು ಮಾಡಬೇಕು ಮತ್ತು ಈ ವರ್ಗಗಳನ್ನು ಎಲ್ಲಾ ರೀತಿಯ ಶೋಷಣೆಗಳಿಂದ ಸಂರಕ್ಷಿಸಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವರ್ಗಗಳು ತಮ್ಮದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಲು ಮತ್ತು ಅವುಗಳ ಆಡಳಿತವನ್ನು ನಡೆಸುವ ಹಕ್ಕುಳ್ಳವರಾಗಿರುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸಮಾರಂಭಗಳನ್ನು ನಡೆಸುವ ಸ್ವಾತಂತ್ರ್ಯ ಮತ್ತು ಸಂಘ-ಸಂಸ್ಥೆಗಳನ್ನು ರಚಿಸುವ ಸ್ವಾತಂತ್ರ್ಯವು ಪ್ರತಿಯೊಬ್ಬರೂ ಹೊಂದಿದ್ದಾರೆ. ಕೃಷಿಭೂಮಿ, ಕೈಗಾರಿಕಾ ಬಂಡವಾಳ, ವ್ಯಾಪಾರೋದ್ಯಮ, ಎಲ್ಲಾ ರೀತಿಯ ಉತ್ಪಾದನಾ ಮತ್ತು ಆರ್ಥಿಕ ಕ್ಷೇತ್ರಗಳ ಒಡೆತನದಲ್ಲಿ ಸೂಕ್ತ ಪಾಲು ತಡೆಯಲು ಎಲ್ಲಾ ನಾಗರೀಕರೂ ಸಮಾನ ಅವಕಾಶಗಳನ್ನು ಸೃಷ್ಟಿಸುವಂತಹ ನಿಯಮಗಳನ್ನು ಸರ್ಕಾರಗಳು ಜಾರಿಗೆ ತರಬೇಕು. ಈ ನಾಡಿನ ಸಂಪತ್ತು ಯಾವುದೇ ಕಾರಣಕ್ಕೂ ಕೆಲವೇ ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗದಂತೆ  ಸರ್ಕಾರಗಳು ಆರ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು. ಸರ್ಕಾರಗಳು ರೈತರ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುವಂತಹ ನಿಯಮಗಳನ್ನು ರೂಪಿಸಬೇಕು; ದುರ್ಬಲರ, ಅಸಹಾಯಕ ವೃದ್ಧರ, ಮತ್ತು ದೈಹಿಕ ಅಸಮರ್ಥತೆಯ ಕಾರಣದಿಂದಾಗಿ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲಾಗದವರಿಗೆ ಸರ್ಕಾರಗಳು ಸಹಾಯವನ್ನು ಮಾಡಬೇಕು.  

ಮೇಲ್ಕಂಡ ಎಲ್ಲಾ ಹಕ್ಕು ಅಧಿಕಾರಗಳನ್ನು ಜಾರಿಗೆ ತಂದು, ಸಂವಿಧಾನದ ಎಲ್ಲಾ ಆಶಯಗಳು ಯಥಾವತ್ತಾಗಿ ಜಾರಿಯಾದರೆ, ಸ್ವಾತಂತ್ರ್ಯಪಡೆದ ಕೇವಲ ಇಪ್ಪತ್ತೇ ವರ್ಷಗಳ ಅವಧಿಯಲ್ಲಿ, ಭಾರತ ದೇಶವು ಜಾತಿ-ಕೋಮುಗಳ ತಾರತಮ್ಯವಿಲ್ಲದ ಮತ್ತು ಬಡತನದ ಬಾಧೆ ಇಲ್ಲದ ಸಮೃದ್ಧ ದೇಶ ವಾಗುತ್ತದೆ ಎಂದು ಬಾಬಾಸಾಹೇಬ ಅಂಬೇಡ್ಕರರು ಹೇಳಿದ್ದರು. ಆದರೆ ನಮ್ಮ ದೇಶವನ್ನು ಆಳಿದ ಎಲ್ಲ ಸರ್ಕಾರಗಳು ಸಂವಿಧಾನದ ಎಲ್ಲಾ ಆಶಯಗಳನ್ನು ಉಲ್ಲಂಘಿಸಿ ಅಲಕ್ಷಿಸಿದ್ದಾರೆ! ಇದೀಗ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರೆ ಇದರ ಪರಿಣಾಮವಾಗಿ, ಬಹುಸಂಖ್ಯಾತ ಭಾರತೀಯರು ಜಾತೀಯತೆ ಮತ್ತು ಕೋಮುವಾದದ ಬಲಿಪಶುಗಳಾಗಿದ್ದಾರೆ ಹಾಗೂ ಬಡತನದ ಬೇಗೆಯಲ್ಲಿ ಇಂದಿಗೂ ಬೇಯುತ್ತಿದ್ದಾರೆ.  


ಎಸ್‌.ಸಿ.ಎಸ್‌.ಟಿ.ಗಳ ವಿರುದ್ಧ ಗಂಟೆಗೆ ಮೂರು ದೌರ್ಜನ್ಯಗಳು ನಡೆಯುತ್ತವೆ; ಪ್ರತಿದಿನ ಕನಿಷ್ಠ ಮೂರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ  

ತುತ್ತಾಗುತ್ತಿದ್ದಾರೆ; ಮತ್ತು ಪ್ರತಿದಿನ 90ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳು ಮೇಲ್ದಾತಿ ಕಾಮುಕರ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಈ  

ಜಾತಿವಾದಿ ದೌರ್ಜನ್ಯಕೋರರ ಪೈಕಿ ಶೇಕಡ 98 ಕ್ಕಿಂತ ಹೆಚ್ಚಿನ ಮಂದಿಗೆ ಯಾವ ಶಿಕ್ಷೆಯೂ ಆಗುತ್ತಿಲ್ಲ ಎಂದು ಹೇಳಿದರು.  


ಮುಸ್ಲಿಮರ ಮತ್ತು ಕ್ರೈಸ್ತರ ವಿರುದ್ಧ ಪ್ರತಿವರ್ಷ 400 ನಿರಂತರವಾಗಿ ದಾಳಿಗೆ ತುತ್ತಾಗುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ಈ ದಾಳಿ ಮತ್ತು ದೌರ್ಜನ್ಯಗಳು ಹಲವು ಪಟ್ಟು ಹೆಚ್ಚಾಗಿವೆ. ಹೆಚ್ಚಿನ ಕೋಮುಗಲಭೆಗಳು ನಡೆಯುತ್ತಿವೆ; ಅವರುಗಳ ಚರ್ಚು ಮತ್ತು ಮಸೀದಿಗಳು ಮೂಲಭೂತ ಹಕ್ಕಾಗಿರುವ ಎಸ್‌.ಸಿ., ಎಸ್‌.ಟಿ. ಮತ್ತು ಓ.ಬಿ.ಸಿ. ಗಳ ಮೀಸಲಾತಿಯನ್ನು ಸಂರಕ್ಷಿಸಲು ಇಲ್ಲಿಯತನಕ ಒಂದು ಕಾಯಿದೆಯನ್ನು ಜಾರಿಗೊಳಿಸಿಲ್ಲ. ಇದರ ಪರಿಣಾಮವಾಗಿ ಮೀಸಲಾತಿಯು ಸಂಪೂರ್ಣವಾಗಿ ಭರ್ತಿಯಾಗಿಲ್ಲ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯ ಪ್ರಮಾಣವನ್ನೂ ಹೆಚ್ಚಿಸಿಲ್ಲ. ಕರ್ನಾಟಕ ರಾಜ್ಯದಲ್ಲಿ, ನ್ಯಾ. ನಾಗಮೋಹನದಾಸ್ ಆಯೋಗದ ಶಿಫಾರಸ್ಸಿನಂತೆ, ಎಸ್‌.ಸಿ. ಮತ್ತು ಎಸ್‌.ಟಿ.ಗಳ ಮೀಸಲಾತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿ, ಮಹರ್ಷಿ ವಾಲ್ಮೀಕಿ ಮಠದ ಗುರುಗಳಾದ ಪರಮಪೂಜ್ಯ ಶ್ರೀ ಪ್ರಸನ್ನಾನಂದ ಸ್ವಾಮೀಜಿಯವರು ಕಳೆದ ಎಂಟು ತಿಂಗಳಿಂದ ಸತ್ಯಾಗ್ರಹ ಮಾಡುತ್ತಿದ್ದರೂ ರಾಜ್ಯ ಸರ್ಕಾರವು ಇನ್ನೂ ತನಕ ಸ್ಪಂದಿಸಿಲ್ಲ. ಅದಲ್ಲದೆ, ನಕಲಿ ಜಾತಿ ಸರ್ಟಿಫಿಕೇಟ್ಗಳ ದಂಧೆಯನ್ನು  

ನಿಯಂತ್ರಿಸುವಲ್ಲೂ ಸರ್ಕಾರಗಳು ವಿಫಲವಾಗಿವೆ ಎಂದರು.  


ಕರ್ನಾಟಕ ರಾಜ್ಯ ಸರ್ಕಾರಗಳು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 50000 ಶಿಕ್ಷಕರ ಹುದ್ದೆಗಳನ್ನೂ, ಉನ್ನತ ಶಿಕ್ಷಣ ಇಲಾಖೆಯಲ್ಲಿ 20000 ಉಪನ್ಯಾಸಕ  

ಹುದ್ದೆಗಳನ್ನೂ ಇಂದಿಗೂ ಭರ್ತಿಮಾಡಿಲ್ಲ; ಆರೋಗ್ಯ ಇಲಾಖೆಯಲ್ಲಿ ಸಾವಿರಗಟ್ಟಲೆ ವೈದ್ಯ ಮತ್ತು ಅರೋಗ್ಯ ಸಿಬ್ಬಂದಿಯನ್ನು ಭರ್ತಿಮಾಡಿಲ್ಲ; ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಹೊರಗುತ್ತಿಗೆಯ ಮೂಲಕ ನೇಮಕಾತಿ ಮಾಡುತ್ತಾ, ರಾಜ್ಯದಲ್ಲಿರುವ ಸಾವಿರಾರು ಯುವಕ ಯುವತಿಯರನ್ನು ಶಾಶ್ವತವಾಗಿ ನಿರುದ್ಯೋಗಿಗಳನ್ನಾಗಿಸಿವೆ. ವರ್ಣಾಶ್ರಮ ನೀತಿಯನ್ನು ಚಾಚೂ ತಪ್ಪದೆ  ಪಾಲಿಸುತ್ತಿರುವ ಸರ್ಕಾರಗಳು, ಕಸ ಗುಡಿಸುವ-ಹೊಲಸು ಬಾಚುವ ಕೆಲಸಗಳಲ್ಲಿ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ನೀಡಿ ಕೇವಲ ಎಸ್‌.ಸಿ./ಎಸ್‌. ಟಿ. ಗಳನ್ನೇ, ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೆ, ಗುತ್ತಿಗೆ ಕಾರ್ಮಿಕರನ್ನಾಗಿ ನೇಮಿಸಿಕೊಂಡಿವೆ.  ಎಸ್‌.ಸಿ. ಎಸ್‌. ಟಿ. ಓ.ಬಿ.ಸಿ. ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಪೈಕಿ ಅನಕ್ಷರಸ್ಥರು ಮತ್ತು ನಿರುದ್ಯೋಗಿಗಳು ಹಿಂದೆಂದಿಗಿಂತ ಹೆಚ್ಚಾಗಿದ್ದಾರೆ; ಶೇಕಡಾ 80 ಕ್ಕಿಂತಲೂ ಹೆಚ್ಚುಮಂದಿ ಭೂಮಿಯಿಲ್ಲದ ಬಡ ರೈತರಾಗಿದ್ದಾರೆ; ಕಳೆದ 40-50 ವರ್ಷಗಳಿಂದ ಇವರುಗಳು ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ  

ಜಮೀನುಗಳಿಗೆ ಇನ್ನೂ ತನಕ ಹಕ್ಕುಪತ್ರಗಳು ಸಿಕ್ಕಿಲ್ಲ. ಅನಾದಿಕಾಲದಿಂದಲೂ ಅಡವಿಯನ್ನೇ ನೆಚ್ಚಿ ಬದುಕುತ್ತಿದ್ದ ಆದಿವಾಸಿಗಳನ್ನು ದೌರ್ಜನ್ಯದಿಂದ  

ಹೊರದೂಡಲಾಗುತ್ತದೆ. ಇಂದು ಇವರುಗಳು ನೆಲೆಯಿಲ್ಲದ ಅಲೆಮಾರಿಗಳಾಗಿ ಅಲೆಯುವಂತಾಗಿದೆ.  

ಹಳ್ಳಿಗಾಡಿನ ಬದುಕಿಗೆ ಬೇಸತ್ತು ನಗರ ಪ್ರದೇಶಗಳಿಗೆ ವಲಸೆ ಬರುವ ಇವರು ಅಲ್ಲಿ ಅಸಂಘಟಿತ ಅಸುರಕ್ಷಿತ ನಿರಾಶ್ರಿತ ಕೂಲಿಕಾರ್ಮಿಕರಾಗಿ  

ಬದುಕುತ್ತಿದ್ದಾರೆ; ಬೀದಿ ಗುಡಿಸುವ ಹಾಗೂ ಒಳಚರಂಡಿಗಳಲ್ಲಿ ಇಳಿದು ಹೊಲಸು ಬಾಚುವ ಕನಿಷ್ಠ ಕೂಲಿ ಪಡೆವ ಪೌರಕಾರ್ಮಿಕರಾಗಿ ಬದುಕುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 33,000 ಹಳ್ಳಿಗಳ ಪೈಕಿ 11,000 ಕ್ಕಿಂತ ಹೆಚ್ಚಿನ ಹಳ್ಳಿಗಳಲ್ಲಿ, ಎಸ್‌.ಸಿ./ಎಸ್‌.ಟಿ.ಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿಯೂ ಇಲ್ಲವಾಗಿದೆ! ಈ ಸಾಮಾಜಿಕ ದುರಂತಕ್ಕೆ ಮೂಲ ಕಾರಣವು ಸರ್ಕಾರಗಳು ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಆರ್ಥಿಕ ನೀತಿ-ನಿಯಮಗಳೇ ಆಗಿವೆ. ನಮ್ಮ ರಾಷ್ಟ್ರದ ಒಟ್ಟಾರೆ ಸಂಪತ್ತಿನಲ್ಲಿ ಶೇಕಡಾ 80 ಕ್ಕಿಂತ ಹೆಚ್ಚಿನ ಪಾಲು ಕೇವಲ ಇಪ್ಪತ್ತೈದು ಮೇಲ್ದಾತಿ ಕುಟುಂಬಗಳ ಒಡೆತನದಲ್ಲಿವೆ. ಎಪ್ಪತ್ತೈದು ವರ್ಷಗಳ ಕಾಲ, ಸಂವಿಧಾನಕ್ಕೆ ವಿರುದ್ಧವಾದ ದುರಾಡಳಿತದಬಲಿಪಶುಗಳಾಗಿರುವ ನಾವು ಇದೀಗ ಜಾಗೃತರಾಗೋಣ ಮತ್ತು ಸಂವಿಧಾನ ಎಲ್ಲಾ ಸದಾಶಯಗಳನ್ನು ಯಥಾವತ್ತಾಗಿ ಜಾರಿಗೆ ತರಲು ನಾವೇ ಸಜ್ಜಾಗೋಣ, ಜಾತೀಯತೆ-ಕೋಮುವಾದದ ಕರಾಳತೆಯಿಂದ ಬಿಡುಗಡೆ ಪಡೆಯ ಮತ್ತು ಬಡತನದ ಬೇಗೆಯಿಂದ ವಿಮೋಚನೆಯಾಗಲು ಸಂವಿಧಾನವು ನೀಡಿರುವ ಹಕ್ಕು, ಅಧಿಕಾರ, ಸಂರಕ್ಷಣೆ ಮತ್ತು ಅವಕಾಶಗಳ ಬಗ್ಗೆ ಅರಿಯೋ ಹಾಗೂ ಸಂವಿಧಾನಾತ್ಮಕ ಹೋರಾಟದ ಮೂಲಕ ಗೆಲುವು ಸಾಧಿಸೋಣ ಎಂದು ಹೇಳಿದರು.  


ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿಗಳಾದ ಶಿವಪುತ್ರ​‍್ಪ ಗುಮಗೇರಿ, ಜಗ್ಗೇಶ್, ಜಿಲ್ಲಾ ಅಧ್ಯಕ್ಷ ಮೈಲಾರ​‍್ಪ ವಕೀಲರು, ಮುಖಂಡರಾದ ಆನಂದ ಬಂಡಾರಿ, ಪಕ್ರುಬೀ ಮಾ ಸೇರಿದಂತೆ ಬಹುಜನ ಸಮಾಜ ಪಾರ್ಟಿಯ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ