ಹೈನುಗಾರಿಕೆಯಲ್ಲಿ ಉತ್ತಮ ಲಾಭ ಕಂಡುಕೊಳ್ಳಲು ಸಾಧ್ಯ: ಡಾ.ನೀಲಕಂಠ ಅಂಗಡಿ
ರಾಣಿಬೆನ್ನೂರ 11: ಹೈನುಗಾರಿಕೆಯು ರೈತರಿಗೆ ನಿರಂತರ ಆದಾಯ ತರುವ ವೃತ್ತಿಯಾಗಿದ್ದು, ವೈಜ್ಞಾನಿಕ ನಿರ್ವಹಣೆಯಿಂದ ಹೈನುಗಾರಿಕೆಯಲ್ಲಿ ಉತ್ತಮ ಲಾಭ ಕಂಡುಕೊಳ್ಳಲು ಸಾಧ್ಯವಿದೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ನೀಲಕಂಠ ಅಂಗಡಿ ಹೇಳಿದರು.
ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಡೆದ ಜಾನುವಾರುಗಳ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಪೋಷಕಾಂಶಗಳ ಕೊರತೆ, ಗರ್ಭಕೋಶದ ಸೋಂಕು, ಹಾರ್ಮೋನುಗಳ ವ್ಯತ್ಯಾಸದಿಂದ ಮಿಶ್ರತಳಿ ರಾಸುಗಳು ಸಕಾಲದಲ್ಲಿ ಗರ್ಭ ಧರಿಸುವುದಿಲ್ಲ. ಸಮತೋಲಿತ ಪೌಷ್ಟಿಕ ಆಹಾರ, ಸಸಾರಜನಕ ಹೊಂದಿರುವ ದ್ವಿದಳ ಧಾನ್ಯಗಳು ಮೇವು, ಎಣ್ಣಿ ಕಾಳುಗಳ ಹಿಂಡಿಯನ್ನು ನೀಡುವುದರಿಂದ ಗರ್ಭ ಧರಿಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಗತ್ಯ ಇದ್ದರೆ ಚಿಕಿತ್ಸೆ ಸಹ ಕೊಡಿಸಬಹುದು ಎಂದು ತಿಳಿಸಿದರು.
ಚರ್ಮಗಂಟು ರೋಗ ತಡೆಗಟ್ಟಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ದನಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ. ರೈತರು ತಮ್ಮ ಎತ್ತುಗಳು ಹಾಗೂ ಹಸುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ರೋಗ ಹರಡದಂತೆ ತಡೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.
ಹಿರಿಯ ಪಶುವೈದ್ಯಕೀಯ ಪರೀಕ್ಷಕ ಎಚ್.ಆರ್.ನಾಯಕ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಲಕಪ್ಪ ಮಾಸಣಗಿ, ಶೇಕಪ್ಪ ಬತ್ತಿಕೊಪ್ಪ, ಮಾದೇವಪ್ಪ ಮಲ್ಲಾಡದ, ಬೀರ್ಪ ಹೊನ್ನತ್ತಿ, ರೇಖಾ ಹುಚಗೊಂಡರ, ಸುಮಲತಾ ತಳವಾರ ಇದ್ದರು.