ಕಾಗವಾಡ

ಮಂಗಸೂಳಿ ಮಲ್ಲಯ್ಯಾ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ

ಮಂಗಸೂಳಿ ಮಲ್ಲಯ್ಯಾ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ

ಕಾಗವಾಡ 06: ಕಾಗವಾಡ ತಾಲೂಕಾ ಸರಕಾರಿ ಆಡಳಿತ ಇಲಾಖೆ ವತಿಯಿಂದ ಶುಕ್ರವಾರ ದಿ. 5ರಂದು ಸಂಜೆ ತಾಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯಾ ದೇಗುಲದ ಮುಂಭಾಗದಲ್ಲಿ ರಾಜ್ಯದ ಮುಜರಾಯಿ ಇಲಾಖೆಯಿಂದ ನೀಡಿರುವ ಅಧಿಸೂಚನೆಯಂತೆ ಗೋ ಪೂಜೆ ಕಾರ್ಯಕ್ರಮ ನೆರವೇರಿತು. 

ಇದೇ ರೀತಿ ಗ್ರಾಮದ ಹನುಮಾನ ಮಂದಿರದಲ್ಲಿ ಸರಕಾರದ ಆದೇಶ ಮೇರಿಗೆ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಸಮ್ಮುಖದಲ್ಲಿ ಗೋವಿಗೆ ಬೆಲ್ಲು, ಬಾಳೆ, ಮುಂತಾದ ಸಿಹಿ ನೀಡಿ ಪೂಜೆ ಸಲ್ಲಿಸಿದರು. 

ತಾಯಿ ಹಾಲಿನಷ್ಟೇ ಹಸುವಿನ ಹಾಲು ಪ್ರಾಮುಖ್ಯತೆ ಹೊಂದಿದೆ. ಹೀಗಾಗಿ ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಇಳಿವಯಸ್ಸಿನಲ್ಲಿ ಕಸಾಯಿಖಾನೆಗೆ ಕಳುಹಿಸುವುದನ್ನು ತಪ್ಪಿಸಲು ಮುಜರಾಯಿ ಇಲಾಖೆಯ 'ಎ' ಮತ್ತು 'ಬಿ' ಗ್ರೇಡ್ ದೇವಸ್ಥಾನದಲ್ಲಿ ಇಲಾಖೆ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ನಾವೆಲ್ಲರೂ ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋ ಮಾತೆಯನ್ನು ಪೂಜಿಸಿ, ಸಂರಕ್ಷಿಸೋಣ ಎಂದು ಕಾಗವಾಡ ತಹಶೀಲ್ದಾರ ರಾಜೇಶ ಬುರಲಿ ಹೇಳಿದರು. 

ಕೃಷಿ ಉತ್ಪನ್ನ ಮಾರುಕಟ್ಟೆಯ ಸಂಚಾಲಕ ರವೀಂದ್ರ ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೀತಾ ಪಾಟಿಲ, ಊರಿನ ಮುಖಂಡರಾದ ಅಭಯ ಪಾಟೀಲ, ತಾಲೂಕಾ ಪಂಚಾಯತಿ ಮುಖ್ಯಾಧಿಕಾರಿ ವೀರಣಗೌಡ ಎಗಣಗೌಡರ, ಸಿಡಿಪಿಓ ಸಂಜೀವಕುಮಾರ ಸದಲಗೆ, ಬಿಇಓ ಮಲ್ಲಪ್ಪಾ ಮುಂಜೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಯ್ಯಾ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಸಂಜಯ ಶೆಟ್ಟಿ, ಮುಕುಂದ ಪೂಜಾರಿ, ಸೇರಿದಂತೆ ಮಂದಿರದ ಆರ್ಚಕರು ಇದ್ದರು. 

ಇದೇ ರೀತಿ ಕಾಗವಾಡ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯ ಗ್ರಾಮದೇವತೆಗಳ ಮಂದಿರದ ಮುಂಭಾಗದಲ್ಲಿ ಸ್ಥಳೀಯ ಗ್ರಾಮದ ಮುಖಂಡರು, ಅಧಿಕಾರಿಗಳು, ಆರ್ಚಕರು ಗೋವಿಗೆ ಪೂಜೆ ಸಲ್ಲಿಸಿ ಗೋ ಪೂಜೆ ಕಾರ್ಯಕ್ರಮ ನೆರವೇರಿಸಿದರು. 


ಸುದ್ದಿ ಓದಿ