ಗುಳೇಗುಡ್ಡ

ಗಾಯಿತ್ರಿ ನಗರ: ಮೂಲಭೂತ ಸೌಲಭ್ಯಕ್ಕೆ ಆಗ್ರಹ

ಗಾಯಿತ್ರಿ ನಗರ: ಮೂಲಭೂತ ಸೌಲಭ್ಯಕ್ಕೆ ಆಗ್ರಹ


 ಗುಳೇದಗುಡ್ಡ 25: ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಪಟ್ಟಣದ ಗಾಯಿತ್ರಿ ನಗರದ ನಿವಾಸಿಗಳು ಗುರುವಾರ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಗಾಯಿತ್ರಿ ನಗರದ ನಿವಾಸಿಗಳು ಅಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿ, ಗಾಯಿತ್ರಿ ನಗರದಲ್ಲಿ ನಾಗರಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಇದರಿಂದ ಅಲ್ಲಿನ ನಿವಾಸಿಗಳು ನಿತ್ಯ ಸಾಕಷ್ಟು ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ರಾತ್ರಿ ಸಮಯದಲ್ಲಿ ಇಡೀ ನಗರ ಕತ್ತಲು ಪ್ರದೇಶವಾಗುತ್ತಿದೆ. ಸರಿಯಾಗಿ ವಿದ್ಯುತ್ ವ್ಯವಸ್ಥೆ ಇಲ್ಲ. ಇನ್ನೂ ರಸ್ತೆ, ಚರಂಡಿ ಇಲ್ಲವೇ ಇಲ್ಲ. ಹೀಗಿರುವಾಗ ಇಲ್ಲಿ ವಾಸಿಸುವ ಜನರು ದಿನನಿತ್ಯ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗಿದೆ ಎಂದು ಅಲ್ಲಿನನಿವಾಸಿಗಳು ಅಧಿಕಾರಿಗಳ ಎದುರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. 

ಗಾಯಿತ್ರಿ ನಗರದಲ್ಲಿನ ನಿವಾಸಿಗಳಿಗೆ ಯಾವುದೇ ಸರ್ಕಾರಿ ಸೌಲತ್ತುಗಳು ದೊರೆಯುತ್ತಿಲ್ಲ. ಚರಂಡಿ, ನೀರಿನ ವ್ಯವಸ್ಥೆ, ರಸ್ತೆ, ಬೀದೀಪೀಪ ಸೇರಿದಂತೆ ಯಾವುದೇ ನಾಗರಿಕ ಸೌಕರ್ಯಗಳು ಈ ನಗರಕ್ಕ ಮರಿಚಿಕೆಯಾಗಿವೆ. ಇಲ್ಲಿನ ನಿವಾಸಿಗಳು ಕೂಡಾ ಪ್ರತಿವರ್ಷ ಗರಪಟ್ಟಿ, ಕಸವಿಲೇವಾರಿ ಕರ ಸೇರಿದಂತೆ ಪುರಸಭೆಗೆ ಭರಣಾ ಮಾಡಬೇಕಾದ ಎಲ್ಲ ಬಿಲ್ಲುಗಳನ್ನು ಸರಿಯಾಗಿ ತುಂಬುತ್ತಿದ್ದಾರೆ. ಆದರೂ ಗಾಯಿತ್ರಿ ನಗರಕ್ಕೆ ಯಾವುದೇ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಈ ಕುರಿತು ಸಾಕಷ್ಟು ಭಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. 

ಇನ್ನಾದರೂ ಅಧಿಕಾರಿಗಳು ಹಾಗೂ ಈ ಭಾಗದ ಜನಪ್ರತಿನಿಧಿಗಳು ಗಾಯಿತ್ರಿ ನಗರದ ನಿವಾಸಿಗಳ ಗೋಳು ಕೇಳಿಕೊಂಡು ಅಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಗುರು ಅಂಗಡಿ, ರಾಜು ಗೌಡರ, ಸಂಗಮೇಶ ಬಾದೋಡಗಿ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳಾದ ಮಲ್ಲು ಹುನಗುಂದ, ಎಲ್‌.ಎಸ್‌.ಮಹೇಂದ್ರಕರ, ನಿಂಗಪ್ಪ ಹಡಪದ, ಎಸ್‌.ಕೆ.ಬಾವಿಕಟ್ಟಿ, ರಾಮಣ್ಣ ಕಂಬಾರ, ಲಲಿತಾ ಕುದರಿ, ಅಬ್ದುಲ್‌ರಜಾಕ ಭಾಗವಾನ್, ನಾಗಪ್ಪ ಹಳದೂರ, ಮೆಹಬೂಬ್‌ಸಾಬ್ ಇಳಕಲ್ಲ ಸೇರಿದಂತೆ ಇನ್ನೂ ಅನೇಕರು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿ ಮನವಿ ಸಲ್ಲಿಸಿದರು. 


ಸುದ್ದಿ ಓದಿ