ನಗರಸಭೆಯ ದರಗಳ ಪರಿಷ್ಕರಣೆ ಜನಸಾಮಾನ್ಯರ ಮೇಲೆ ಬರೆ
ರಾಣೆಬೇನ್ನೂರ 06: ಕಟ್ಟಡ ಪರವಾನಿಗೆ ಮತ್ತು ಇನ್ನಿತರೆ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿರುವ ನಗರಸಭೆಯ ತೀರ್ಮಾನವು ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಹೇಳಿದರು.
ಶುಕ್ರವಾರದಂದು ಸ್ಥಳೀಯ ನಗರಸಭೆಯ ಆವರಣದಲ್ಲಿ ಈ ಕುರಿತು ಆಕ್ಷೇಪಿಸಿ ಪೌರಾಯುಕ್ತ ಎಫ್ ಐ ಇಂಗಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ಕಟ್ಟಡ ಸಾಮಗ್ರಿಗಳು ಹಾಗೂ ಕಾರ್ಮಿಕರ ಕೂಲಿ ದರಗಳು ಸಾಕಷ್ಟು ಏರಿಕೆಯಾಗಿವೆ. ಜನ ಸಾಮಾನ್ಯರು ಕಷ್ಟಪಟ್ಟು ತಮ್ಮ ಕನಸಿನ ಮನೆ ನಿರ್ಮಿಸಿಕೊಳ್ಳಲು ಸಾಲ ಮಾಡಿಕೊಂಡಿರುತ್ತಾರೆ ಈಗ ನಗರಸಭೆಯವರು ದರ ಪರಿಷ್ಕರಿಸಿ ಹೆಚ್ಚಿಸಿದರೆ ಜನ ಸಾಮಾನ್ಯರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಹಾಕಿದಂತಾಗುತ್ತದೆ ಎಂದರು.
ನಗರಸಭೆ ಆರ್ಥಿಕತೆ ಹಾಗೂ ನಗರದ ಅಭಿವೃದ್ಧಿ ಕಾರ್ಯಗಳ ಸಂಪನ್ಮೂಲಗಳನ್ನು ಕ್ರೂಢೀಕರಿಸಲು ಪರ್ಯಾಯ ವ್ಯವಸ್ಥೆ ಮಾಡಿರಿ ಇದನ್ನು ಬಿಟ್ಟು ಜನ ಸಾಮಾನ್ಯರಿಗೆ ಹೊರೆಯಾಗುವಂತೆ ದರ ದುಪ್ಪಟ್ಟು ಮಾಡುವುದು ಅವೈಜ್ಞಾನಿಕವಾಗಿದ್ದು ಗುಬ್ಬಿಯ ಮೇಲೆ ಭ್ರಹ್ಮಾಸ್ತೊ ಬಿಟ್ಟಂತಾಗುತ್ತದೆ ಎಂದರು.
ಸಾಮಾನ್ಯ ಜನರು ಈಗಾಗಲೇ ಕಟ್ಟಡ ನಿರ್ಮಾಣದ ಪರವಾನಿಗೆ ಸಂದರ್ಭದಲ್ಲಿ ಅಭಿವೃದ್ಧಿ ಶುಲ್ಕ, ಖುಲ್ಲಾ ಜಾಗೆ ಶುಲ್ಕ, ಕೆರೆ ಅಭಿವೃದ್ಧಿ ಶುಲ್ಕ, ರಿಂಗ್ ರೋಡ್ ಸೆಸ್, ಕುಡಿಯುವ ನೀರಿನ ಸೆಸ್, ಸ್ಲಂ ಸೆಸ್, ಬೆಟರ್ಮೆಂಟ್ ಶುಲ್ಕ, ಸ್ಟೋರೇಜ್ ಶುಲ್ಕ, ಲೇಬರ್ ಸೆಸ್, ಇತ್ಯಾದಿ ಹೊರೆ ಹೊರುತ್ತಿದ್ದು ಈಗಿರುವ ದರಗಳೇ ಸಾಕಷ್ಟು ಅಧಿಕವಾಗಿರುವಾಗ ಹೆಚ್ಚಳ ಮಾಡುವ ನಿರ್ಧಾರ ಕೈಬಿಟ್ಟು ಪ್ರಸಕ್ತ ದರಗಳನ್ನು ಮುಂದುವರೆಸಬೇಕೆಂದರು.
ಮನವಿ ಸ್ವೀಕರಿಸಿ ಮಾತನಾಡಿದ ಎಫ್ ಐ ಇಂಗಳಗಿಯವರು ಗ್ರಾಪಂ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಇರುವಷ್ಟು ಈ ದರವಾಗಿದೆ. ಇದು ಅತಿ ಕಡಿಮೆಯಾಗಿದೆ. ಬೇರೆ ನಗರಸಭೆ ಮಹಾನಗರ ಪಾಲಿಕೆಗೆ ಹೋಲಿಸಿದರೆ ಬಹಳಷ್ಟು ಕಡಿಮೆ. ಮುಂಬರುವ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಎಸ್.ಕೆ ಉಪ್ಪಿನ ಗುರುಪ್ರಕಾಶ ಜಂಬಗಿ, ಉಪಾಧ್ಯಕ್ಷ ಮಾಲತೇಶ ಕಜ್ಜರಿ,ಡಿಕೆ ಹನುಮಂತಪ್ಪ, ಯೋಗಿ, ಶಿವಣ್ಣ ಸುರಭಿ, ಸಚಿನ್, ಪ್ರಕಾಶ ಪೂಜಾರ ಸೇರಿದಂತೆ ಮತ್ತಿತರರು ಇದ್ದರು.