ಲಯನ್ಸ ಸಂಸ್ಥೆಯ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ
ಇಂಡಿ23: ತಾಲೂಕಿನಾದ್ಯಂತ ಅಂಧರು ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ಲಯನ್ಸ ಸಂಸ್ಥೆಯ ವತಿಯಿಂದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಶಿಬಿರಗಳನ್ನು ನಡೆಸಿ ಇಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ಚಿಕಿತ್ಸಾಲಯದಲ್ಲಿ ನೇತ್ರ ಚಿಕಿತ್ಸೆ ಮಾಡಿಕೊಡಲಾಗುತ್ತದೆ. ಕಳೆದ ವರ್ಷದಲ್ಲಿ ಇಂಡಿ ತಾಲೂಕಿನಲ್ಲಿ ಒಂದು ಸಾವಿರ ಮಂದಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಅಳವಡಿಸಲಾಗಿತ್ತು ಎಂದು ಲಯನ್ಸ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು.
ಅವರು ಭಾನುವಾರ ಪಟ್ಟಣದ ಲಯನ್ಸ ಸಂಸ್ಥೆವತಿಯಿಂದ ಇಂಡಿಯ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣೆ ನಡೆಸಿ, ಎರಡನೆಯ ಶಿಬಿರದಲ್ಲಿ ಆಯ್ಕೆಯಾದ 20 ಜನರಿಗೆ ಹುಬ್ಬಳ್ಳಿಯ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಚಿಕಿತ್ಸೆ ನಂತರ ಇಂಡಿಗೆ ಆಗಮಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಬರಮಾಡಿಕೊಂಡು ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ಶ್ರೀಪತಿಗೌಡ ಪಾಟೀಲ ಮತ್ತು ಕಾರ್ಯದರ್ಶಿ ಎಂ.ಎಸ್. ಬಿರಾದಾರ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಹತ್ತು ಸಾವಿರ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಚಿಕಿತ್ಸೆಗೆ ಒಳಗಾದ ಎಲ್ಲರೂ ಉತ್ತಮ ದೃಷ್ಠಿ ಹೊಂದಿದ್ದಾರೆ. ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಸಹಕಾರದಿಂದ ಈ ಕಾರ್ಯ ರೂಪಿಸಲಾಗುತ್ತಿದೆ.ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವ ರೋಗಿಗಳನ್ನು ಹುಬ್ಬಳ್ಳಿಯ ಜೋಶಿ ಆಸ್ಪತ್ರೆಯ ಸಿಬ್ಬಂದಿ ಬಸ್ಸಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿದ ನಂತರ ರೋಗಿಗಳನ್ನು ಅವರ ಮನೆಗೆ ಬಿಟ್ಟು ಬರುತ್ತಾರೆ.
ಇಂಡಿ ತಾಲೂಕಿನಲ್ಲಿ ಲೈನ್ಸ ಸಂಸ್ಥೆಯಿಂದ ಕಣ್ಣಿನ ಶಸ್ತ್ರ ಚಿಕಿತ್ಸೆಯ ಜೊತೆಗೆ ಗರ್ಭಕೋಶ ಶಸ್ತ್ರ ಚಿಕಿತ್ಸೆ, ಹೃದಯ ಚಿಕಿತ್ಸೆ ಮತ್ತಿತರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿ ಬಡವರ ಆರೋಗ್ಯ ಕಾಪಾಡಲು ಲಯನ್ಸ ಸಂಸ್ಥೆಯ ಪದಾಧಿಕಾರಿಗಳು ಶ್ರಮಿಸುತ್ತಾರೆ ಎಂದರು.
ಎ.ಬಿ.ಬಿರಾದಾರ, ಡಾ. ಮಲ್ಲಿಕಾರ್ಜುನ ಅಂಕಲಗಿ, ಹೋಮಗಾರ್ಡ ಮಲ್ಲಿಕಾರ್ಜುನ ವಾಲಿಕಾರ, ಲಯನ್ಸ ಶಾಲೆಯ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರಿದ್ದರು.