ಹೈಕಮಾಂಡ್ಗೆ ನನಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ: ಶ್ರೀಮಂತರ ವಿಶ್ವಾಸ
ಕಾಗವಾಡ 14: ನನಗೆ ಸಚಿವ ಸ್ಥಾನ ನೀಡುವುದು ಬಿಜೆಪಿ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು, ನನ್ನ ಮೇಲೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ. ಬಿಜೆಪಿ ಪಕ್ಷ ವಿಶಾಲವಾದ ಪಕ್ಷ. ಒಳ್ಳೆಯ ನಿರ್ಣಯ ಕೈಗೊಳ್ಳುತ್ತಾರೆಯೆಂದು ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ಮಾಹಿತಿ ನೀಡುವಾಗ ಮಾಜಿ ಸಚಿವ ಶ್ರೀಮಂತ ಪಾಟೀಲರು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ಸಚಿವ ಸ್ಥಾನ ದೊರೆಯಬೇಕೆಂದು ನಾನು ಎಂದಿಗೆ ಲಾಬಿ ಮಾಡಿಲ್ಲಾ. ಕಾಗವಾಡ ಕ್ಷೇತ್ರದ ಕೃಷ್ಣಾ ನದಿ ತೀರದಲ್ಲಿ ಸುಮಾರು 10 ಗ್ರಾಮಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ. ಇಲ್ಲಿಯ ಜನ-ಜಾನುವಾರಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಿದ್ದೇನೆ.
ನಾನು ಸಚಿವನಾಗಿದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯವಾಗಿದೆ. ಈ ಕಾರಣ ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡದೆ ಕ್ಷೇತ್ರದಲ್ಲಿ ಉಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ನನ್ನ ಪರ ಕೆಲವರು ಸಚಿವ ಸ್ಥಾನ ನೀಡಿರಿಯೆಂದು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ. ಅದು ನನ್ನ ಮೇಲೆಯಿರುವ ಅವರ ನಂಬಿಕೆಯೆಂದು ಶ್ರೀಮಂತ ಪಾಟೀಲ ಸ್ಪಷ್ಠಪಡಿಸಿದರು.