ಮಾಜಿ ಶಾಸಕ ಮಂಜುನಾಥ್ ಕುನ್ನೂರ ಮರಳಿ ಕಾಂಗ್ರೆಸ್ಗೆ
ಲೋಕದರ್ಶನ ವರದಿ
ಶಿಗ್ಗಾವಿ 28: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಭಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದು ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.
ಬಿಜೆಪಿಯಲ್ಲಿದ್ದ ಪ್ರಬಲ ಪಂಚಮಸಾಲಿ ಮುಖಂಡ ಮಂಜುನಾಥ್ ಕುನ್ನೂರು ಅವರು ಕೈ ಪಾಳಯ ಸೇರಿದ್ದು. ಮಂಜುನಾಥ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದು ಅದರ ಲಾಭ ಎತ್ತಲು ಪ್ರಯತ್ನ ಸಾಗಿದೆ. ಅವರು ಸೋಮವಾರ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಭೇಟಿಗೆ ತೆರಳಿದ್ದು ಬೆಂಗಳೂರಿನಲ್ಲೇ ಪಕ್ಷ ಸೇರ್ಪಡೆಯಾಗಿದ್ದಾರೆ. ಅಲ್ಲೇ ಟಿಕೆಟ್ ಬಗ್ಗೆಯೂ ಅಂತಿಮ ತೀರ್ಮಾನ ಆಗಬಹುದು. ಹಾಗೊಂದು ವೇಳೆ ಮಂಜುನಾಥ ಕುನ್ನೂರು ಅವರು ಅಥವಾ ಕುಟುಂಬಕ್ಕೆ ಟಿಕೆಟ್ ನೀಡಿದರೆ ಇದುವರೆಗೆ ಸ್ಪರ್ಧೆಸುತ್ತಿದ್ದ ಒಂದು ಬಾರಿ ಶಾಸಕರೂ ಆಗಿದ್ದ ಅಜ್ಜಂಪೀರ್ ಖಾದ್ರಿ ಪ್ರತಿಕ್ರಿಯೆ ಏನು ಎನ್ನುವುದನ್ನು ನೋಡಬೇಕಾಗುತ್ತದೆ? ವಿನಯ ಕುಲಕರ್ಣಿ ಅವರು ಕಣಕ್ಕಿಳಿದರೆ ಬೆಂಬಲ ನೀಡುತ್ತೇನೆ. ಎಂದು ಇತ್ತೀಚೆಗೆ ಖಾದ್ರಿ ಹೇಳಿದ್ದರು. ಇದುವರೆಗೆ ಬಿಜೆಪಿ ಜತೆ ಸೇರಿಕೊಂಡವರು ಕಣಕ್ಕಿಳಿಯುವುದಾದರೆ ಬೆಂಬಲ ಇಲ್ಲ ಎಂದು ಹೇಳಿದ್ದಾರೆ. ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದು ಸ್ಪಷ್ಟವಿಲ್ಲ.
ತಾಲೂಕಿನ ಮುಖಂಡರಾದ ಶಂಭುಲಿಂಗ ಆಜೂರ, ಗುರುನಗೌಡ ಪಾಟೀಲ, ಮಹ್ಮದ ಗುಲ್ಮೀ, ಹನುಮಂತ ಬಂಡಿವಡ್ಡರ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು