ರಾಣೆಬೆನ್ನೂರ

ಕಹಿ ಘಟನೆಗಳನ್ನೆಲ್ಲಾ ಮರೆತು ಭಾವೈಕ್ಯತೆಯ ಹಬ್ಬ ಮೊಹರಂ ಆಚರಿಸಿ; ರವೀಂದ್ರಗೌಡ ಪಾಟೀಲ

ಕಹಿ ಘಟನೆಗಳನ್ನೆಲ್ಲಾ ಮರೆತು ಭಾವೈಕ್ಯತೆಯ ಹಬ್ಬ ಮೊಹರಂ ಆಚರಿಸಿ; ರವೀಂದ್ರಗೌಡ  ಪಾಟೀಲ

ರಾಣೇಬೆನ್ನೂರು 17: ಕಳೆದ 2 ವರ್ಷಗಳ ಹಿಂದೆ ರಾಜ್ಯದಲ್ಲಿ ಕೆಲವು ಕಿಡಿಗೇಡಿಗಳು ‘ಕೋಮು ಭಾವನೆ ಕೆರಳಿಸಲೆಂದೆ ಸೃಷ್ಟಿಸಿದ್ದ ಹಲಾಲ್ ಕಟ್, ಜಲಾಲ್ ಕಟ್, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕೊರೊನಾ ನೆಪದಲ್ಲಿ ಮಸೀದಿಗಳಲ್ಲಿ ನಮಾಜ್ ನಿಷೇಧದಂತಹ ಕಹಿ ಘಟನೆಗಳಿಂದ ನೊಂದು ಹೋಗಿದ್ದ ಮುಸ್ಲಿಂ ಸಮುದಾಯದವರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಈ ಮೊಹರಂ ಹಬ್ಬದಲ್ಲಿ ಅಂತಹ ಕಹಿ ಘಟನೆಗಳನ್ನೆಲ್ಲಾ ಮರೆತು ನೆಮ್ಮದಿಯಿಂದ ಹಬ್ಬ ಆಚರಿಸಿ ಜಾತಿಯ ಹಂಗಿಲ್ಲದೆ ಮನುಕುಲ ಒಂದೇ ಎಂಬ ಸಂದೇಶವನ್ನು ಕಿಡಿಗೇಡಿಗಳಿಗೆ ರವಾನಿಸಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ  ಪಾಟೀಲ ಹೇಳಿದರು.  

ಅವರು ಇಂದು ಮುಷ್ಟೂರು ಗ್ರಾಮದಲ್ಲಿ ಸರ್ವಧರ್ಮಿಯರೆಲ್ಲಾ ಸೇರಿ ಅತ್ಯಂತ ಭಕ್ತಿ ಮತ್ತು ಸಡಗರದಿಂದ ಆಚರಿಸುವ ಮೊಹರಂ ಹಬ್ಬ ಆಚರಣೆಯ ಬೀಬಿ ಫಾತಿಮಾ, ಹಸನ್‌ಹುಸೇನಿ, ಮೌಲಾವಲಿ ಲಾಲ್‌ಸಬ್ ವಲಿ ಯಂತಹ ಮಹಾತ್ಮರು ದೇಶದ ಶಾಂತಿ ಮತ್ತು ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿದ ಪಂಜುಗಳ ಅಲಹಾ ಸ್ವಾಮಿಯ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನುಷ್ಯ ತನ್ನ ಜೀವನದ ಸಿಹಿ ಕಹಿ ಘಟನೆಗಳಲ್ಲಿ ಸಹಿ ಘಟನೆ ಮರೆತರೂ ಕಹಿ ಘಟನೆಗಳನ್ನು ಎಂದೂ ಮರೆಯಬಾರದು. 

ಇತಿಹಾಸ ಮರೆತವರಿಗೆ ಭವಿಷ್ಯವಿಲ್ಲ ಎಂದು ಪಾಟೀಲರು ಸರ್ವಧರ್ಮಗಳ ಭಾವೈಕ್ಯತೆಯ ಕೊಂಡಿಯಂತೆ ಇರುವ ಈ ಮೊಹರಂ ಹಬ್ಬವನ್ನು ಶಹರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಅತೀ ಹೆಚ್ಚು ಆಚರಿಸುತ್ತಾರೆ. ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಜನಾಂಗದವರು ಇಲ್ಲದಿದ್ದರೂ ಈ ಹಬ್ಬ ಹಿಂದೂಗಳಿಗೆ ಅತ್ಯಂತ ಭಕ್ತಿ ಮತ್ತು ಸಡಗರದ ಹಬ್ಬವಾಗಿದೆ ಈ ಹಬ್ಬದ ಐದು ದಿನದ ಆಚರಣೆಯಲ್ಲಿ ಜನಪದ ಕಲೆಗೆ ಅತೀ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎಂದರು. ಈ ಭವ್ಯ ಮೆರವಣಿಗೆಯಲ್ಲಿ ಅಲ್ಲಾಭಕ್ಷಸಾಬ್ ಸೇತಸನದಿ, ದಿಳ್ಳೆಪ್ಪ ಕುರುಬರ, ದೊಣ್ಣೆಪ್ಪ ಹರಿಜನ, ಪ್ರದೀಪ ರಡ್ಡಿ ಎರೇಕುಪ್ಪಿ, ನಾಗನಗೌಡ ಪಾಟೀಲ, ನಾಗಸಯ್ಯ ಹಿರೇಮಠ, ಮಹಮ್ಮದಅಲಿ ಪಿಂಜಾರ, ಸೋಮಪ್ಪ ಕೋಣನತೆಲಿ, ಅಕ್ಬರಸಾಬ್ ಸೇತಸನದಿ, ಹರಿಹರಗೌಡ ಪಾಟೀಲ, ಮುನಾಫ್‌ಸಾಬ್ ಸೇತಸನದಿ ಮುಂತಾದ ಮುಖಂಡರು ನೂರಾರು ಭಕ್ತರು ಪಾಲ್ಗೊಂಡಿದ್ದರು.  

ಹಲಗೆಯ ತಾಳಕ್ಕೆ ತಕ್ಕಂತೆ ಹುಲಿವೇಷಧಾರಿಗಳು ಹೆಜ್ಜೆ ಹಾಕುತ್ತಿದ್ದರೆ ಮಟಕಿ ಹೆಜ್ಜೆ ಕುಣಿತ, ಮರಗಾಲು ಹೆಜ್ಜೆ ಕುಣಿತ ಎಲ್ಲರ ಗಮನ ಸೆಳೆಯುತ್ತಿತ್ತು. 


ಸುದ್ದಿ ಓದಿ