ನೆರೆ ಹಾನಿ: ಪರಿಹಾರ ಧನ ನೀಡಲು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ
ಕಾಗವಾಡ 29: ಕೃಷ್ಣಾ ನದಿ ಮಹಾಪೂರ ನದಿ ನೀರಿನಲ್ಲಿ ಜುಗೂಳ ಸೇರಿ 3 ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದವು. ಈ ಗ್ರಾಮಗಳಲ್ಲಿಯ 1107 ಪಡಿತರಧಾರಕ ಕುಟುಂಬದವರಿಗೆ ಸರಕಾರ ನೀಡಿರುವ ತಾತ್ಕಾಲಿಕ ಪರಿಹಾರ ತಲಾ 10 ಸಾವಿರ ರೂ. ಘೋಷಣೆ ಮಾಡಿದ್ದರು. ಈ ಕುಟುಂಬಗಳಿಗೆ ನೀಡಲು ನಿರಾಕರಿಸಿದ್ದಾರೆ. ಇದರಿಂದ ಮಂಗಳವಾರದಂದು ರಸ್ತೆ ತಡೆ ಕೈಗೊಳ್ಳಲಿದ್ದೇವೆ ಎಂದು ಜುಗೂಳ ಗ್ರಾಮದ ಮುಖಂಡರು, ಡಿಕೆಎಸ್ಎಸ್ ಸಕ್ಕರೆ ಕಾರ್ಖಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ ಎಚ್ಚರಿಕೆ ನೀಡಿದರು.
ರವಿವಾರ ರಂದು ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬೇರೆ-ಬೇರೆ ಸಂಘ, ಸಂಸ್ಥೆಗಳ ಮುಖಂಡರು ಒಂದುಗೂಡಿ ತಮ್ಮ ಆಕ್ರೋಶ ಹೊರಹಾಕಿದರು.
10 ವರ್ಷಗಳಿಂದ ಮಹಾಪೂರ ನೀರಿನಲ್ಲಿ ನೊಂದಿದ್ದರೂ ನ್ಯಾಯವಿಲ್ಲಾ:
ಡಿಕೆಎಸ್ಎಸ್ ಸಕ್ಕರೆ ಕಾರ್ಖಾನೆ ಸಂಚಾಲಕ ಅಣ್ಣಾಸಾಹೇಬ ಪಾಟೀಲ ಮಾತನಾಡಿ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಜುಗೂಳ, ಮಂಗಾವತಿ, ಶಹಾಪುರ ಈ ಮೂರು ಗ್ರಾಮಗಳು ಕಳೇದ 10 ವರ್ಷಗಳಿಂದ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಸನ್ 2005, 2006, 2019 ಮತ್ತು ಈ ವರ್ಷ 2021 ರಂದು ಮಹಾಪೂರ ನೀರು ಬಂದಿದ್ದರಿಂದ ಜನರು ತತ್ತರಿಸಿ ಹೋಗಿದ್ದಾರೆ.
ಈ ವರ್ಷ ಪ್ರತಿಯೊಂದು ಕುಟುಂಬಕ್ಕೆ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ರೂ. ನೀಡುವ ಘೋಷಣೆ ಮಾಡಿದ್ದರು. ಆದರೆ ಈಗ ನಿರಾಕರಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ದೋಣಿ ಮುಖಾಂತರ ಬಂದು ಪೊಲೀಸ್ರ ಸಮ್ಮುಖದಲ್ಲಿ ಎಲ್ಲರನ್ನು ಇಲ್ಲಿಂದ ಸ್ಥಳಾಂತರಿಸಿ ಶಿರಗುಪ್ಪಿ ಕಾಳಜಿ ಕೇಂದ್ರದಲ್ಲಿ ಸುಮಾರು 1 ತಿಂಗಳುಗಟ್ಟಲೆ ಇಟ್ಟಿದ್ದರು.
ಈ ಎಲ್ಲ ಮನೆಗಳು ನೀರಿನಲ್ಲಿ ಮುಳುಗಿವೆ. ಆದರೂ ಈಗ ಸರ್ವೆ ಕಾಮಗಾರಿಗೆ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ 1107 ಕುಟುಂಬಗಳಿಗೆ, ನಿಮ್ಮ ಮನೆಗಳು ನೀರಿನಲ್ಲಿ ಮುಳುಗೆಯಿಲ್ಲಾ ಎಂದು ಹೇಳಿ ತಾತ್ಕಾಲಿಕ ಪರಿಹಾರ ನೀಡುವುದನ್ನು ನಿರಾಕರಿಸುತ್ತಿದ್ದಾರೆ, ಇದು ಅನ್ಯಾಯ. ಸೋಮವಾರವರೆಗೆ ಇದು ಸರಿಪಡಿಸದೆ ಹೋದರೆ ಮಂಗಳವಾರದÀಂದು ಅನಿವಾರ್ಯವಾಗಿ ರಸ್ತೆ ತಡೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಳೆದ ಸನ್ 2019ರಲ್ಲಿ ಸಂಪೂರ್ಣವಾಗಿ ಜುಗೂಳ ಗ್ರಾಮದ 319 ಮನೆಗಳು ಮುಳುಗಡೆವಾಗಿದ್ದರೂ ಸರ್ವೆ ಮಾಡಿ ಆ ಕುಟುಂಬಗಳಿಗೆ ಮನೆಗಳು ನೀಡದೆ ನಿರಾಕರಿಸಿದ್ದಾರೆ. ಈಗ ಈ ಕುಟುಂಬಗಳ ಯಾವುದೇ ವಿಚಾರಣೆ ಮಾಡುವದಿಲ್ಲಾ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ನಮ್ಮ ಆಕ್ರೋಶಕ್ಕೆ ಇನ್ನೊಂದು ಕಾರಣವಾಗಿದೆಯೆಂದು ಅಣ್ಣಾಸಾಹೇಬ ಪಾಟೀಲ ಹೇಳಿದರು.
ಶಾಶ್ವತವಾಗಿ ಸ್ಥಳಾಂತರಿಸಿರಿ:
ಮಾಜಿ ಎಪಿಎಂಸಿ ಅಧ್ಯಕ್ಷ ಅನೀಲ ಕಡೋಲೆ ಮಾತನಾಡುತ್ತ ಸತತವಾಗಿ 5 ಬಾರಿ ನದಿಗೆ ಮಹಾಪೂರ ಬಂದಿದ್ದು ಇಲ್ಲಿಯ ಜನರು ಮಹಾಪೂರ ನೀರಿಗೆ ಭಯಭೀತರಾಗಿದ್ದಾರೆ. ನಮ್ಮನ್ನು ಇಲ್ಲಿಂದ ಶಾಶ್ವತವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರಿಯೆಂದು ಎಲ್ಲ ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಎಲ್ಲ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಈ ಬಗ್ಗೆ ಯಾರೂ ಕೂಡ ಮಾತನಾಡುತ್ತಿಲ್ಲಾ. ಈಗ ತಾತ್ಕಾಲಿಕ ಪರಿಹಾರ ಹಣವು ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಇದ್ಯಾವ ನ್ಯಾಯ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಪೂರ ನೀರಿನಲ್ಲಿ ನಿಂತು ಮನವಿ ಮಾಡಿದ ಕುಟುಂಬಕ್ಕೂ ಪರಿಹಾರ ನಿರಾಕರಿಸಿದ್ದಾರೆ:
ಮಹಾಪೂರ ನೀರಿನಲ್ಲಿ ತನ್ನ ಮನೆ ಸಂಪೂರ್ಣವಾಗಿ ಮುಳುಗಡೆವಾದಾಗ ಅದೇ ನೀರಿನಲ್ಲಿ ನಿಂತು ಗುಲಾಬ ದಸ್ತಗೀರ ಅತ್ತಾರ ಇವರು ಆಗೀಣ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರಿಗೆ, ಕಳೇದ 2019 ಮತ್ತು ಈಗ 2021 ಮಹಾಪೂರ ನೀರಿನಲ್ಲಿ ನನ್ನ ಮನೆ ಮುಳುಗಡೆವಾಗಿದೆ. ಈಗ ನಾನು ನಿರಾಧಾರನಾಗಿದ್ದೇನೆ. ನನಗೆ ನ್ಯಾಯ ವದಿಗಿಸಿಯೆಂದು ನೀರಿನಲ್ಲಿ ನಿಂತು ವಿಡಿಯೋ ಮುಖಾಂತರ ಮನವಿ ಮಾಡಿಕೊಂಡಿದ್ದಾನೆ. ಆದರೆ, ಇದೇ ಗುಲಾಬ ಅತ್ತಾರ ಇವರ ಮನೆ ನೀರಿನಲ್ಲಿ ಮುಳಗೆಯಿಲ್ಲಾಯೆಂದು ಹೇಳಿ 10 ಸಾವಿರ ರೂ. ಪರಿಹಾರ ಧನ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಈ ಅಧಿಕಾರಿಗಳಿಗೆ ಇನ್ಯಾವ ಸಾಕ್ಷಿ ಬೇಕಾಗಿದೆ? ಎಂಬ ಆಕ್ರೋಶ ಇಲ್ಲಿಯ ಜನರು ಹೊರಹಾಕಿದ್ದು, ಅನಿವಾರ್ಯವಾಗಿ ರಸ್ತೆ ತಡೆ ಮಾಡಲು ಮುಂದಾಗಿದ್ದಾರೆ.
ಒಂದು ಕಣ್ಣಿಗೆ ಸುಣ್ಣ; ಇನ್ನೊಂದು ಕಣ್ಣಿಗೆ ಬೆಣ್ಣೆ:
ಪ್ರವಾಹದ ನೀರಲ್ಲಿ ಗ್ರಾಮಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆಯೆಂದು ಎಲ್ಲ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಧನ ನೀಡಿದ್ದಾರೆ. ಇಲ್ಲಿಗೆ ಮಾತ್ರ ನಿರಾಕರಿಸುತ್ತಿದ್ದಾರೆ. ಒಂದು ಕಣ್ಣಿಗೆ ಸುಣ್ಣ; ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕಾರ್ಯ ಇಲ್ಲಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯ ಉಮೇಶ ಪಾಟೀಲ ಆರೋಪಿಸಿದ್ದಾರೆ.
ಗ್ರಾಪಂ ಉಪಾಧ್ಯಕ್ಷ ಕಾಕಾ ಪಾಟೀಲ, ಅನೀಲ ಕಡೋಲೆ, ಅನೀಲ ಸುಂಕೆ, ಅಮೀನ ನಂದಗಾಂವೆ, ಉಮೇಶ ಪಾಟೀಲ, ಬಸವರಾಜ ನಂದಾಳೆ, ಮೆಹಬೂಬ ಕಿಲ್ಲೆದಾರ, ಕಲ್ಲಪ್ಪಾ ಶಿವರಾಯಿ, ಉದಯ ದೇಸಾಯಿ, ಪವನ ಶಿರಡೋಣೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.